ಬೆಂಗಳೂರು : ರಾಜ್ಯದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ 8 ಮಂದಿ ಬಲಿಯಾಗಿದ್ದಾರೆ. ಹೌದು, ರಾಜ್ಯದಲ್ಲಿ ಮಹಾಮಳೆಗೆ 8 ಮಂದಿ ಸಾವನ್ನಪ್ಪಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಿರವಾಡಿ ಗ್ರಾಮದಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಶಾಂತಮ್ಮ ತಳವಾರ ಎಂಬವರು ಮೃತಪಟ್ಟಿದ್ದಾರೆ .
ಬ್ಯಾಡಗಿ ತಾಲೂಕಿನ ಶಿಡೇನೂರು ಬಳಿ ಗಾಳಿಯಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲಿದ್ದ ರೈತ ಬಾಬುಲಾಲ್ ಬ್ಯಾಡಗಿ ಮೃತಪಟ್ಟಿದ್ದಾರೆ. ಹಾನಗಲ್ ತಾಲೂಕಿನ ಕೂಡಲ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶಿಸಿ ಶಶಾಂಕಗೌಡ ಮುದ್ದಿನಗೌಡ ಎಂಬ ಬಾಲಕ ಮೃತಪಟ್ಟಿದ್ದಾನೆ.
ದೊಡ್ಡಬಳ್ಳಾಪುರ ತಾಲೂಕಿನ ಕಂಗಳಾಪುರದಲ್ಲಿ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ರಂಗಪ್ಪ ಎಂಬವರು ಮೃತಪಟ್ಟಿದ್ದಾರೆ.
ಮರದ ಕೊಂಬೆ ಬಿದ್ದು ವ್ಯಕ್ತಿ ಸಾವು
ವಿಷ್ಣು ಬೆಳ್ಯಪ್ಪ (64) ಮೃತರು ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಲ್ದಾರೆಯಲ್ಲಿ ಘಟನೆ ನಡೆದಿದೆ.ಮನೆ ಬಳಿ ಕೆಲಸ ಮಾಡುತ್ತಿದ್ದಾಗ ಮರದ ಕೊಂಬೆ ಬಿದ್ದು ಗಾಯಗೊಂಡಿದ್ದ ವಿಷ್ಣು ಬೆಳ್ಯಪ್ಪ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ನಾಲ್ವರ ಪೈಕಿ ಓರ್ವ ವಿದ್ಯಾರ್ಥಿ ನಾಪತ್ತೆ ಆಗಿದ್ದು ನೀರಿನಲ್ಲಿ ಕೊಚ್ಚಿ ಹೋಗಿರುವ ಶಂಕೆ ಇದೆ. ಬೆಂಗಳೂರಿನ ಖಾಸಗಿ ಕಾಲೇಜಿನ 7 ವಿದ್ಯಾರ್ಥಿಗಳು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರಕ್ಕೆ ತೆರಳಿದ್ದರು.