ಬೆಂಗಳೂರು: ತೆರಿಗೆ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿರುವ ಕರ್ನಾಟಕ 2024- 25 ನೇ ಸಾಲಿನಲ್ಲಿ ತಲಾದಾಯದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ.
ಕಳೆದ ಒಂದು ದಶಕದಲ್ಲಿ ತಲಾದಾಯ ಹೆಚ್ಚಳ ಪ್ರಮಾಣದಲ್ಲಿಯೂ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. 2014-15ರಲ್ಲಿ ಕರ್ನಾಟಕ ಜನರ ತಲಾದಾಯ 1,05,697 ರೂ. ಇತ್ತು. 2024- 25ರಲ್ಲಿ ಶೇಕಡ 93.6 ರಷ್ಟು ಏರಿಕೆಯಾಗಿದ್ದು, 2,04,605ರೂಪಾಯಿಗೆ ತಲುಪಿದೆ.
2024-25ನೇ ಸಾಲಿನಲ್ಲಿ ರಾಷ್ಟ್ರಮಟ್ಟದಲ್ಲಿ ಭಾರತದ ಒಟ್ಟು ತಲಾ ರಾಷ್ಟ್ರೀಯ ಆದಾಯವು (ಎನ್ಎನ್ಐ) 1,14,710 ರೂ. ಆಗಿದೆ. ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ತಲಾದಾಯ ಹೆಚ್ಚಳವಾಗಿದೆ. 1.96.309 ರೂ. ತಲಾದಾಯ ಹೊಂದಿರುವ ತಮಿಳುನಾಡು ಎರಡನೇ ಸ್ಥಾನದಲ್ಲಿದೆ ಎಂದು ಲೋಕಸಭೆಗೆ ಕೇಂದ್ರ ಹಣಕಾಸು ಸಚಿವರು ಲಿಖಿತ ಉತ್ತರ ನೀಡಿದ್ದಾರೆ.