ಬೆಂಗಳೂರು: ಆರ್.ಎಸ್.ಎಸ್ ನಿಷೇಧ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಆರ್.ಎಸ್.ಎಸ್ ಗೆ ಕೈ ಹಾಕಿದರೆ ಕಾಂಗ್ರೆಸ್ ಇರಲ್ಲ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಟಾಂಗ್ ನೀಡಿರುವ ರಾಜ್ಯ ಕಾಂಗ್ರೆಸ್, ಭಾರತದಲ್ಲಿ ಆರ್.ಎಸ್.ಎಸ್ ಎಂಬ ವಿಚ್ಛಿದ್ರಕಾರಿ ಸಂಘಟನೆ ಈಗಾಗಲೇ ಮೂರು ಬಾರಿ ನಿಷೇಧಕ್ಕೊಳಪಟ್ಟಿತ್ತು. ಆಗಲೂ ಕಾಂಗ್ರೆಸ್ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ ಎಂದು ಟ್ವೀಟ್ ಮೂಲಕ ಗುಡುಗಿದೆ.
ಆರ್.ಎಸ್.ಎಸ್ ಭಾರತ ವಿರೋಧಿ ಸಂಘಟನೆ ಎಂದು ಸರ್ದಾರ್ ಪಟೇಲರೇ ಹೇಳಿದ್ದರು. ಸರ್ಕಾರಿ ಹಾಗೂ ಅನುದಾನಿತ ಶಾಲಾ ಆವರಣದಲ್ಲಿ ಆರ್.ಎಸ್.ಎಸ್ ಚಟುವಟಿಕೆಗಳನ್ನು ತಡೆಯುವ ಬಗ್ಗೆ ವಿಮರ್ಷಿಸಲಾಗುವುದು ಎಂದು ತಿಳಿಸಿದೆ.
ಆರ್.ಎಸ್ ಎಸ್ ರಾಷ್ಟ್ರಭಕ್ತಿ ಕಲಿಸಿದೆ. ನೆಹರೂ, ಇಂದಿರಾ ಎಲ್ಲರೂ ನಿಷೇಧಕ್ಕೆ ಕೈ ಹಾಕಿ ಕೈ ಸುಟ್ಟುಕೊಂಡರು. ನಿಷೇಧದ ಕೆಲಸ ಮಾಡಿದಾಗ ದೇಶದಲ್ಲಿ ಕಾಂಗ್ರೆಸ್ ಬಂದಿಲ್ಲ. ಬಜರಂಗದಳ, ಆರ್.ಎಸ್.ಎಸ್ ನಿಷೇಧಕ್ಕೆ ಕೈ ಹಾಕಿದರೆ ಕಾಂಗ್ರೆಸ್ ಇರುವುದಿಲ್ಲ. ಮೆರವಣಿಗೆ, ವಿಜಯೋತ್ಸವದ ವೇಳೆ ಪಾಕ್ ಪರ ಘೋಷಣೆ ಕೂಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ, ರಾಜ್ಯವನ್ನು ವಿಭಜನವಾದದ ಮೂಲಕ ಕಟ್ಟುವುದು ಬೇಡ. ಆರ್.ಎಸ್.ಎಸ್, ಬಜರಂಗದಳ ನಿಷೇಧ ಮಾಡಲು ನಿಮಗೆ ಹಕ್ಕಿಲ್ಲ. ಆರ್.ಎಸ್.ಎಸ್ ರಾಷ್ಟ್ರಭಕ್ತಿ ಸಂಕೇತ ಎಂದು ಕಾಂಗ್ರೆಸ್ಸಿಗರೇ ಹೇಳಿದ್ದಾರೆ. ಕಾಂಗ್ರೆಸ್ ನವರ ಜಗಳ ಹೊರಬರದಂತೆ ಮಾಡಲು ಇದು ಷಡ್ಯಂತ್ರ ಎಂದು ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದರು.
ಭಾರತದಲ್ಲಿ RSS ಎಂಬ ವಿಚ್ಛಿದ್ರಕಾರಿ ಸಂಘಟನೆ 3 ಬಾರಿ ನಿಷೇಧಕ್ಕೊಳಪಟ್ಟಿತ್ತು.
ಸರ್ದಾರ್ ಪಟೇಲರೇ ಭಾರತ ವಿರೋಧಿ ಸಂಘಟನೆ ಎಂಬ ಸರ್ಟಿಫಿಕೇಟ್ ನೀಡಿದ್ದರು.
ಕಾಂಗ್ರೆಸ್ ಆಗಲೂ ಇತ್ತು ಈಗಲೂ ಇದೆ, ಮುಂದೆಯೂ ಇರಲಿದೆ.ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ಆವರಣದಲ್ಲಿ RSS ಚಟುವಟಿಕೆಗಳನ್ನು ತಡೆಯುವ ಕುರಿತು ವಿಮರ್ಶಿಸಲಾಗುವುದು. pic.twitter.com/aVNnfCiStt
— Karnataka Congress (@INCKarnataka) May 26, 2023