ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಿಂದ ಹೆಚ್ಚುವರಿಯಾಗಿ ಈ ವರ್ಷ 10,000 ಶಿಕ್ಷಕರನ್ನು ವರ್ಗಾವಣೆಗೆ ಗುರುತಿಸಲಾಗಿದೆ. ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ಈ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡಲಿದ್ದು, ಶಿಕ್ಷಕರ ಕೊರತೆಗೆ ಪರಿಹಾರ ಸಿಗಲಿದೆ.
ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ 30 ವಿದ್ಯಾರ್ಥಿಗಳಿಗೆ ಒಬ್ಬರಂತೆ, ಪ್ರೌಢಶಾಲೆಗಳಲ್ಲಿ ಪ್ರತಿ 35 ವಿದ್ಯಾರ್ಥಿಗಳಿಗೆ ಒಬ್ಬರಂತೆ ಶಿಕ್ಷಕರ ಮಾನದಂಡದಡಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದೆ.
ಹೀಗೆ ಹೆಚ್ಚುವರಿಯಾಗಿ ಗುರುತಿಸಲಾದ ಶೇಕಡ 90ರಷ್ಟು ಶಿಕ್ಷಕರಿಗೆ ಆಯಾ ತಾಲೂಕಿನೊಳಗೆ ವರ್ಗಾವಣೆ ಸಿಗಲಿದೆ. ಶೇಕಡ 5ರಷ್ಟು ಶಿಕ್ಷಕರು ತಾಲೂಕಿನ ಹೊರಗೆ ಹಾಗೂ ಜಿಲ್ಲೆಯ ಒಳಗೆ ಮತ್ತು ಶೇಕಡ 5ರಷ್ಟು ಶಿಕ್ಷಕರಿಗೆ ಜಿಲ್ಲೆಯ ಹೊರಗೆ ಸ್ಥಳ ನಿಯುಕ್ತಿ ಮಾಡಲಾಗುವುದು. ಶಿಕ್ಷಕರ ವರ್ಗಾವಣೆಗಾಗಿ ಕೌನ್ಸೆಲಿಂಗ್ ನಡೆಸಲಾಗುವುದು.
ಪ್ರತಿ ವರ್ಷ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ವರ್ಗಾವಣೆ ನಡೆಸಲಾಗುವುದು. ಒಂದು ಬಾರಿ ಹೆಚ್ಚುವರಿ, ಮತ್ತೊಂದು ಬಾರಿ ಕಡ್ಡಾಯ ವರ್ಗಾವಣೆ ನಡೆಸಲಿದ್ದು, ಅಂತೆಯೇ ಈ ವರ್ಷ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿ ಸಿದ್ಧಪಡಿಸಲಾಗಿದೆ. 63,900 ಅರ್ಜಿಗಳು ಸಾಮಾನ್ಯ ವರ್ಗಾವಣೆಗೆ ಸಲ್ಲಿಕೆಯಾಗಿವೆ. ಈ ತಿಂಗಳಲ್ಲೇ ಕೌನ್ಸೆಲಿಂಗ್ ನಡೆಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.