ಬೆಂಗಳೂರು: ಕನ್ನಡ ಬಿಗ್ ಬಾಸ್ ನಡೆಯುತ್ತಿರುವ ಸ್ಟುಡಿಯೋದಲ್ಲಿ ಪರಿಸರ ಮಾನದಂಡಗಳ ಪಲನೆ ಬಗ್ಗೆ ವಾರದೊಳಗೆ ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚನೆ ನೀಡಿದೆ.
ಬಿಗ್ ಬಾಸ್ ಶೋ ಆತಿಥ್ಯ ವಹಿಸಿರುವ ವೇಲ್ಸ್ ಸ್ಟುಡಿಯೋಸ್ ಆಂಡ್ ಎಂಟರ್ ಟೈನ್ ಮೆಂಟ್ ಪ್ರೈವೆಟ್ ಲಿಮಿಟೆಡ್ ನ್ನು ಮುಚ್ಚಬೇಕು ಎಂಬ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಪುಷ್ಫಾ ಸತ್ಯನಾರಾಯಣ ಮತ್ತು ತಜ್ಞ ಸದಸ್ಯ ಪ್ರಶಾಂತ್ ಗಾರ್ಗ್ ಅವರನ್ನೊಳಗೊಂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ದಕ್ಷಿಣ ವಲಯ ಈ ಆದೇಶ ನೀಡಿದೆ.
ವೇಲ್ಸ್ ಸ್ಟುಡಿಯೋಸ್ ಪೂರ್ವಾನುಮತಿಯಿಲ್ಲದೇ ಹಾಗು ತನ್ನ ಆವರಣದಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯ ನೀರನ್ನು ಸಮರ್ಪಕವಾಗಿ ಸಂಸ್ಕರಿಸದೇ ಹೊರಗೆ ಬಿಡುತ್ತಿದೆ ಎಂದು ಆರೋಪಿಸಿ ಬಿಡದಿ ಕೈಗಾರಿಕಾ ವಲಯದಲ್ಲಿರುವ ಸ್ಟುಡಿಯೋ ಸ್ಥಗಿತಗೊಳಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶಿಸಿತ್ತು. ಆದರೆ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ ಎಂದು ವೇಲ್ಸ್ ಸ್ಟುಡಿಯೋಸ್ ತನ್ನ ಅರ್ಜಿಯಲ್ಲಿ ತಿಳಿಸಿದೆ. ಈ ಹಿನ್ನೆಲ್ರ್ಯಲ್ಲಿ ಎನ್ ಜಿಟಿ, ಏಳು ದಿನಗಳ ಒಳಗಾಗಿ ಸ್ಟುಡಿಯೋದಲ್ಲಿ ಪರಿಸರ ಮಾನದಂಡಗಳ ಪಾಲನೆ ಬಗ್ಗೆ ಪರಿಶೀಲನೆ ನಡೆಸುವಂತೆ ಸೂಚಿಸಿದೆ.
