ಭುವನೇಶ್ವರ: ಭುವನೇಶ್ವರದಲ್ಲಿ ಆಘಾತಕಾರಿ ಘಟನೆಯೊಂದರಲ್ಲಿ ಮಹಿಳೆ ಮೇಲೆ ಆಕೆಯ ಗೆಳೆಯ ಮತ್ತು ಅವನ ಇಬ್ಬರು ಸ್ನೇಹಿತರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಒಡಿಶಾ ರಾಜಧಾನಿಯ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ.
ಆರೋಪಿಗಳನ್ನು ಜಗತ್ಸಿಂಗ್ ಪುರ ಜಿಲ್ಲೆಯ ಬಿರಿಡಾ ಪೊಲೀಸ್ ಠಾಣೆ ವ್ಯಾಪ್ತಿಯ ಚಂದನ್ ಕುಮಾರ್, ಪ್ರಸನ್ನ ಕುಮಾರ್ ಆಚಾರ್ಯ ಮತ್ತು ತುಂಬಾ ಅಧೇಯ್ ಬೀದಿಯ ರಾಜೇಶ್ ದಾಸ್ ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಚಂದನ್ ಮತ್ತು ಮಹಿಳೆ ಆನ್‌ಲೈನ್ ನಲ್ಲಿ ಸಂಪರ್ಕಕ್ಕೆ ಬಂದು ನಂತರ ಆತ್ಮೀಯ ಸ್ನೇಹ ಬೆಳೆಸಿಕೊಂಡರು. ಸೆಪ್ಟೆಂಬರ್ 10 ರಂದು, ಫೋಟೋಶೂಟ್ ನೆಪದಲ್ಲಿ ಆರೋಪಿ ಮಹಿಳೆಯನ್ನು ಲಾಡ್ಜ್‌ಗೆ ಕರೆಸಿಕೊಂಡಿದ್ದ.
ಮಹಿಳೆ ಲಾಡ್ಜ್ ತಲುಪಿದಾಗ, ಚಂದನ್ ತನ್ನ ಸ್ನೇಹಿತರನ್ನು ಫೋಟೋಶೂಟ್ ಗಾಗಿ ಬಂದಿರುವ ತನ್ನ ತಂಡದ ಸದಸ್ಯರು ಎಂದು ಪರಿಚಯಿಸಿದ್ದಾನೆ. ಅವರು ಅವಳಿಗೆ ಕುಡಿಯಲು ನೀಡಿದ್ದ ತಂಪು ಪಾನೀಯಕ್ಕೆ ಮಾದಕ ದ್ರವ್ಯವನ್ನು ಬೆರೆಸಿದ್ದರು. ಮಹಿಳೆ ಪ್ರಜ್ಞೆ ಕಳೆದುಕೊಂಡಾಗ ಆರೋಪಿ ಮತ್ತು ಅವನ ಇಬ್ಬರು ಸ್ನೇಹಿತರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಪ್ರಜ್ಞೆ ಬಂದ ನಂತರ ಮಹಿಳೆ ಹೇಗೋ ಅವರಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಮರುದಿನವೇ ಆಕೆ ಆ ಮೂವರ ವಿರುದ್ಧ ದೂರು ದಾಖಲಿಸಿದಳು. ತನಿಖೆಯ ನಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.