ಸಾಯೋಕೆ ನನ್ನ ಒಂದೂವರೆ ಕೋಟಿ ಕಾರೇ ಬೇಕಾಗಿತ್ತಾ…? ಐಷಾರಾಮಿ ಕಾರ್ ಗೆ ಗುದ್ದಿದ ಬೈಕ್ ಸವಾರನ ಮೇಲೆ ಭವಾನಿ ರೇವಣ್ಣ ಕೆಂಡಾಮಂಡಲ

ಮೈಸೂರು: ಬೈಕ್ ನಲ್ಲಿ ಬಂದು ಕಾರ್ ಗೆ ಡಿಕ್ಕಿ ಹೊಡೆದ ವ್ಯಕ್ತಿಗೆ ಜೆಡಿಎಸ್ ನಾಯಕಿ ಭವಾನಿ ರೇವಣ್ಣ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಅವಾಚ್ಯ ಪದಗಳಿಂದ ಬೈಕ್ ಸವಾರನನ್ನು ಬೈದಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಭಾನುವಾರ ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಭವಾನಿ ರೇವಣ್ಣ ಅವರು ಪ್ರಯಾಣಿಸುತ್ತಿದ್ದ ಕಾರ್ ಗೆ ಎದುರಿನಿಂದ ಬಂದ ಬೈಕ್ ಸವಾರ ಬಲಭಾಗದಿಂದ ಬಂದು ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಕಾರ್  ಮುಂಭಾಗಕ್ಕೆ ಹಾನಿಯಾಗಿದೆ. ಇದನ್ನು ಗಮನಿಸಿದ ಭವಾನಿ ರೇವಣ್ಣ ಕಾರ್ ನಿಂದ ಕೆಳಗಿಳಿದು ಬೈಕ್ ಸವಾರನನ್ನು ಹಿಗ್ಗಾಮುಗ್ಗ ಬೈದಾಡಿದ್ದಾರೆ.

ಸಾಯೋಕೆ ನನ್ನ ಒಂದೂವರೆ ಕೋಟಿ ಕಾರೇ ಬೇಕಾಗಿತ್ತಾ ಯಾವುದಾದರೂ ಬಸ್ ಗೆ ಹೋಗಿ ಸಾಯಲು ಆಗಲ್ವಾ? ಸುಟ್ಟು ಹಾಕ್ರೋ ಈ ಗಾಡಿನ ಎಂದು ಬೈಕ್ ಸವಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲಿಗೆ ಬಂದವರು ಸಮಾಧಾನಪಡಿಸಲು ಮುಂದಾದಾಗ ಗಾಡಿ ರಿಪೇರಿಗೆ 50 ಲಕ್ಷ ನೀವು ಕೊಡ್ತೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

50 ಲಕ್ಷ ಕೊಡುವುದಾರೆ ನ್ಯಾಯ ಮಾತಾಡಕ್ಕೆ ಬನ್ನಿ ಎಂದು ಸಮಾಧಾನ ಮಾಡಲು ಮುಂದಾದವರನ್ನು ತರಾಟೆಗೆ ತೆಗೆದುಕೊಂಡ ಭವಾನಿ ರೇವಣ್ಣ, ಬೈಕ್ ಸವಾರ ಸತ್ತು ಹೋಗ್ತಾನೆ ಅಂತ ಅವನ ಬಗ್ಗೆ ಯೋಚನೆ ಮಾಡ್ತಾ ಇದಿರಲ್ಲ ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಆಗಿದೆ ಯಾರು ಕಟ್ಟಿಕೊಡುತ್ತಾರೆ ಎಂದು ಸಿಟ್ಟಿನಿಂದ ಕೂಗಾಡಿ ಬೈದಾಡಿದ್ದಾರೆ.

ದೇಶ ಮುಳುಗಿ ಹೋಗಿತ್ತಾ ಬಲಗಡೆಯಿಂದ ಬಂದು ಗುದ್ದಿದಿಯಲ್ಲ. ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಮಾಡಿದ್ದೀಯಾ ಸಾಯಂಗಿದ್ರೆ ಬಸ್ ಗೆ ಸಿಕ್ಕಾಕೊಂಡು ಸಾಯ್ಬೇಕಿತ್ತು. ನನ್ನ ಕಾರ್  ಡ್ಯಾಮೇಜ್ ಮಾಡೋಕೆ ನೀನು ಯಾವನೋ, ಈ ಬೈಕ್ ಸೀಜ್ ಮಾಡಿಸಿ ಎಂದು ತಾಕೀತು ಮಾಡಿದ್ದಾರೆ.

ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ಜಿ. ಕೃಷ್ಣರಾಜು ಭೇಟಿ ನೀಡಿದ್ದು, ಬೈಕ್ ಸವಾರ ಶಿವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಹೇಳಲಾಗಿದೆ.

ಅಪಘಾತವಾದ ಸಂದರ್ಭದಲ್ಲಿ ಗಾಯಾಳು ಆರೋಗ್ಯ ವಿಚಾರಿಸದೆ ಗಾಡಿ ಡ್ಯಾಮೇಜ್ ಬಗ್ಗೆ ಮಾತಾಡಿ ಅವಾಚ್ಯ ಪದಗಳಿಂದ ಬೈದಾಡಿದ ಭವಾನಿ ರೇವಣ್ಣ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read