ಹಣದುಬ್ಬರವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ‘ಭಾರತ್ ಬ್ರಾಂಡ್’ ಮೂಲಕ ಸರ್ಕಾರ ಬೆಲೆ ಏರಿಕೆಗೆ ಬ್ರೇಕ್ ಹಾಕ್ತಿದೆ. ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೇಳೆಯನ್ನು ಮಾರುಕಟ್ಟೆಗಿಂತ ಕಡಿಮೆ ಬೆಲೆಯಲ್ಲಿ ಜನಸಾಮಾನ್ಯರಿಗೆ ಕೊಡಲಾಗ್ತಿದೆ.
‘ಭಾರತ್ ರೈಸ್’ ಅನ್ನು ಕೆಜಿಗೆ 29 ರೂಪಾಯಿಗೆ ಮಾರಾಟ ಮಾಡಲು ಸರ್ಕಾರ ಪ್ರಾರಂಭಿಸಿದೆ. ಉತ್ತಮ ಗುಣಮಟ್ಟದ ಅಕ್ಕಿಯ ಬೆಲೆ 70 ರೂಪಾಯಿ ದಾಟಿರುವ ಈ ಸಂದರ್ಭದಲ್ಲಿ ಭಾರತ್ ರೈಸ್ ಕೇವಲ 29 ರೂಪಾಯಿಗೆ ಸಿಗಲಿದೆ. 5 ಮತ್ತು 10 ಕೆಜಿ ಪ್ಯಾಕ್‌ಗಳಲ್ಲಿ ಭಾರತ್ ರೈಸ್ ಅನ್ನು ಖರೀದಿಸಬಹುದು.
ಭಾರತ್ ರೈಸ್ ಖರೀದಿ ಎಲ್ಲಿ ?
ಭಾರತ್ ಬ್ರಾಂಡ್‌ನಲ್ಲಿ ಬೇಳೆಕಾಳುಗಳು, ಗೋಧಿ ಹಿಟ್ಟು ಮತ್ತು ಅಕ್ಕಿಯನ್ನು ಮಾರಾಟ ಮಾಡಲಾಗ್ತಿದೆ. ಭಾರತ್ ಅಕ್ಕಿ ಕೆಜಿಗೆ 29 ರೂಪಾಯಿ ಆಗಿದ್ದು, ಮೊದಲ ಹಂತದಲ್ಲಿ ಐದು ಲಕ್ಷ ಟನ್ ಅಕ್ಕಿ ನೀಡಲಾಗುತ್ತಿದೆ. ಅದನ್ನು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಫ್‌ಸಿಐ), ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಎಸಿಎಂಎಫ್) ಮತ್ತು ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ ಫೆಡರೇಶನ್ ಆಫ್ ಇಂಡಿಯಾದಿಂದ (ಎನ್‌ಸಿಸಿಎಫ್) ಖರೀದಿಸಬಹುದು.
ಇದಲ್ಲದೆ ಸೆಂಟ್ರಲ್ ಸ್ಟೋರ್‌ಗಳಲ್ಲಿಯೂ ಭಾರತ್ ರೈಸ್ ಲಭ್ಯವಿದೆ. ಸರ್ಕಾರ ಮೊಬೈಲ್ ವ್ಯಾನ್ ಮೂಲಕವೂ ಮಾರಾಟ ಮಾಡುತ್ತಿದೆ. ಸಹಕಾರಿ ಸಂಸ್ಥೆಗಳು ಮಾತ್ರವಲ್ಲದೆ ಭಾರತ್ ಬ್ರಾಂಡ್‌ನ ಗೋಧಿ ಹಿಟ್ಟು 2000 ಚಿಲ್ಲರೆ ಮಳಿಗೆಗಳಲ್ಲಿ ಲಭ್ಯವಿದೆ. ಮದರ್ ಡೈರಿ, ಸಫಲ್ ಮುಂತಾದ ಮಳಿಗೆಗಳಿಂದಲೂ ಇದನ್ನು ಖರೀದಿಸಬಹುದು.
ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದೇ ?
ಪ್ರಸ್ತುತ ಈ ಸೌಲಭ್ಯ ಲಭ್ಯವಿಲ್ಲ. ಶೀಘ್ರದಲ್ಲೇ ಆನ್‌ಲೈನ್‌ನಲ್ಲೂ ಭಾರತ್ ಬ್ರಾಂಡ್ ಉತ್ಪನ್ನಗಳನ್ನು ಸರ್ಕಾರ ಪರಿಚಯಿಸಲಿದೆ. ಭಾರತ್ ಬ್ರಾಂಡ್ ಅಕ್ಕಿಯನ್ನು ಸರ್ಕಾರ ಶೀಘ್ರದಲ್ಲೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಲಿದೆ. ಭಾರತ್ ಗೋಧಿ ಹಿಟ್ಟಿನ ಬೆಲೆ ಕೆಜಿಗೆ 27 ರೂಪಾಯಿ 50 ಪೈಸೆ, ಭಾರತ್ ಬೇಳೆ ಕಾಳುಗಳ ಬೆಲೆ ಕೆಜಿಗೆ 60 ರೂಪಾಯಿ ನಿಗದಿಪಡಿಸಲಾಗಿದೆ.