ಚೆನ್ನೈ: ಮೈಸೂರಿನಿಂದ ದರ್ಬಾಂಗ್ ಗೆ ಹೊರಟಿದ್ದ ಭಾಗಮತಿ ಎಕ್ಸ್ ಪ್ರೆಸ್ ರೈಲು- ಗೂಡ್ಸ್ ರೈಲು ನಡುವಿನ ಅಪಘಾತ ಪ್ರಕರಣದ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು ವರದಿ ನೀಡಿದ್ದು, ಇದು ದುರುದ್ದೇಶಪೂರ್ವಕ ಕೃತ್ಯ ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.
ಇದು ಅಪಘಾತವಲ್ಲ, ಉದ್ದೇಶಿತ ದುಷ್ಕೃತ್ಯ. ಹಳಿ ಇಂಟರ್ ಲಾಕ್ ತೆಗೆದು ದುಷ್ಕೃತ್ಯ ಎಸಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ಆಯುಕ್ತರು ತನಿಖಾ ವರದಿಯಲ್ಲಿ ಬಹಿರಂಗಪಡಿಸಿದ್ದಾರೆ. ಅಲ್ಲದೇ ಈ ರೈಲು ಅಪಘಾತವನ್ನು ವಿಧ್ವಂಸಕ ಕೃತ್ಯದ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ.
ಹಳಿಯ ಇಂಟರ್ ಲಾಕ್ ವ್ಯವಸ್ಥೆಯನ್ನು ಕಿಡಿಗೇಡಿಗಳು ಕಿತ್ತಿದ್ದ ಹಿನ್ನಲೆಯಲ್ಲಿ ಭಾಗಮತಿ ಎಕ್ಸ್ ಪ್ರೆಸ್ ರೈಲು ನಿಂತಿದ್ದ ಮುಖ್ಯ ಹಳಿ ಬಿಟ್ಟು ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ 13 ಬೋಗಿಗಳು ಹಳಿತಪ್ಪಿದ್ದವು. 19 ಜನರು ಗಾಯಗೊಂಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
2024ರ ಅಕ್ಟೋಬರ್ 11ರಂದು ಚನ್ನೈ ಬಳಿ ಕವರೈ ಪಟ್ಟಿ ರೈಲು ನಿಲ್ದಾಣ ಬಳಿ ಭಾಗಮತಿ ಎಕ್ಸ್ ಪ್ರೆಸ್ ರೈಲು ಗೂಡ್ಸ್ ರೈಲಿಗೆ ಡಿಕಿ ಹೊಡೆದಿತ್ತು. ಪರಿಣಾಮ ಎರಡು ಬೋಗಿಗಳು ಬೆಂಕಿಯಲ್ಲಿ ಹೊತ್ತಿ ಉರಿದಿದ್ದವು. ಹಲವು ಬೋಗಿಗಳು ಹಳಿತಪ್ಪಿದ್ದವು.