ಚಿತ್ರದುರ್ಗ: ಬೆಸ್ಕಾಂ ಕಾಮಗಾರಿ ಅನುಷ್ಠಾನಕ್ಕೆ ಕಾರ್ಯಾದೇಶ ನೀಡಲು ವಿದ್ಯುತ್ ಗುತ್ತಿಗೆದಾರನಿಂದ 3.50 ಲಕ್ಷ ರೂ. ಲಂಚದ ಹಣ ಸ್ವೀಕರಿಸುತ್ತಿದ್ದ ಚಿತ್ರದುರ್ಗ ಬೆಸ್ಕಾಂ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಮ್ಮರಾಯಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಚಿತ್ರದುರ್ಗದ ಅಮೃತ ಆಯುರ್ವೇದಿಕ್ ಆಸ್ಪತ್ರೆಯ ಬಳಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. 35 ಲಕ್ಷ ರೂಪಾಯಿ ವೆಚ್ಚದ ಒಟ್ಟು 10 ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲು ಶೇಕಡ 10ರಷ್ಟು ಹಣವನ್ನು ಲಂಚದ ರೂಪದಲ್ಲಿ ನೀಡುವಂತೆ ತಿಮ್ಮರಾಯಪ್ಪ ಬೇಡಿಕೆ ಇಟ್ಟಿದ್ದರು. ಹೊಳಲ್ಕೆರೆ ತಾಲೂಕು ದುಮ್ಮಿ ಗ್ರಾಮದ ವಿದ್ಯುತ್ ಗುತ್ತಿಗೆದಾರ ಎಸ್.ಆರ್. ಸಂಜಯ್ ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರುದಾರರಿಂದ 3.50 ಲಕ್ಷ ರೂ. ಲಂಚ ಪಡೆಯುವಾಗ ದಾಳಿ ನಡೆಸಿ ತಿಮ್ಮರಾಯಪ್ಪ ಅವರನ್ನು ಬಂಧಿಸಲಾಗಿದೆ. ಲಂಚದ ಹಣವನ್ನು ಜಪ್ತಿ ಮಾಡಿ ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಎಸ್.ಪಿ. ವಾಸುದೇವರಾಮ, ಡಿವೈಎಸ್ಪಿ ಎನ್. ಮೃತ್ಯುಂಜಯ್, ಇನ್ಸ್ಪೆಕ್ಟರ್ ಬಸವರಾಜು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.