ಟಿಂಡರ್‌ ಬಾಯ್‌ಫ್ರೆಂಡ್ ನಂಬಿ 4.5 ಲಕ್ಷ ರೂ. ಕಳೆದುಕೊಂಡ ಮಹಿಳೆ…! ಬೆಚ್ಚಿಬೀಳಿಸುತ್ತೆ ವಂಚನಾ ವಿಧಾನ

ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ 37 ವರ್ಷದ ಮಹಿಳೆಯೊಬ್ಬರು ಟಿಂಡರ್‌ನಲ್ಲಿ ಭೇಟಿಯಾದ ಬಾಯ್‌ಫ್ರೆಂಡ್ ಒಬ್ಬನಿಂದ 4.5 ಲಕ್ಷ ರೂ. ಕಳೆದುಕೊಂಡಿದ್ದಾರೆ. ತಮ್ಮ ಹಣವನ್ನು ಮರಳಿ ಪಡೆಯಲು ಮಹಿಳೆ ಪೊಲೀಸರ ನೆರವು ಯಾಚಿಸಿದ್ದಾರೆ.

ಹುಸಿ ಗುರುತಿನ ಮೂಲಕ ತನ್ನನ್ನು ಆದ್ವಿಕ್ ಚೋಪ್ರಾ ಎಂದು ಪರಿಚಯಿಸಿಕೊಂಡ ವ್ಯಕ್ತಿಯನ್ನು ಈ ಮಹಿಳೆ ಟಿಂಡರ್‌ನಲ್ಲಿ ಭೇಟಿಯಾಗಿದ್ದಾರೆ. ಆತನ ಪ್ರೊಫೈಲ್ ನೋಡಿ ಮರುಳಾದ ಈಕೆ ಆತನ ಮೇಲೆ ಆಸಕ್ತಿ ತೋರಿದ್ದು, ಇಬ್ಬರ ಪ್ರೊಫೈಲ್‌ಗಳೂ ಮ್ಯಾಚ್‌ ಆಗಿವೆ. ವಾಟ್ಸಾಪ್ ಮೂಲಕ ನಡೆಸಿದ ಸಂವಹನದಲ್ಲಿ ತಾನು ಲಂಡನ್‌ನಲ್ಲಿ ವೈದ್ಯನಾಗಿರುವುದಾಗಿ ಆಕೆಗೆ ತಿಳಿಸುತ್ತಾನೆ.

ಇಬ್ಬರ ನಡುವೆ ಹಾಗೇ ಸಲುಗೆ ಬೆಳೆದು, ಮಹಿಳೆಗೆ ಆತನ ಮೇಲೆ ಪ್ರೇಮವಾಗಿದೆ. ಆಕೆಯನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ ಚೋಪ್ರಾ ಆಕೆಯನ್ನು ಭೇಟಿ ಮಾಡಲು ದುಬೈ ಮೂಲಕ ಬೆಂಗಳೂರಿಗೆ ಬರುವುದಾಗಿ ತಿಳಿಸುತ್ತಾನೆ. ಇದಾದ ಕೆಲ ದಿನಗಳ ಬಳಿಕ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಯ ಸೋಗಿನಲ್ಲಿ ಮಹಿಳೆಗೆ ವ್ಯಕ್ತಿಯೊಬ್ಬ ಕರೆ ಮಾಡಿ, ’ಚೋಪ್ರಾ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಅವರೊಂದಿಗೆ ದೊಡ್ಡ ಮೊತ್ತದ ನಗದಿದ್ದ ಕಾರಣ, ಚೋಪ್ರಾ ಬೆಂಗಳೂರಿಗೆ ಅಲ್ಲಿಂದ ಬರಬೇಕೆಂದರೆ ಈ ಮೊತ್ತಕ್ಕೆ ಗ್ಯಾರಂಟಿಯಾಗಿ 68,500 ರೂ.ಗಳನ್ನು ಪಾವತಿ ಮಾಡುವಂತೆ,” ಈ ಮಹಿಳೆಗೆ ಕೇಳಿದ್ದಾನೆ.

ಇದರ ಬೆನ್ನಿಗೇ 1.8 ಲಕ್ಷ ರೂ.ಗಳ ಹೆಚ್ಚುವರಿ ಶುಲ್ಕ ಕೇಳಿದ ಆ ವ್ಯಕ್ತಿ, ಪ್ರಕ್ರಿಯಾ ಶುಲ್ಕವಾಗಿ ಇನ್ನೂ 2.06 ಲಕ್ಷ ರೂ.ಗಳ ಬೇಡಿಕೆ ಇಟ್ಟಿದ್ದಾನೆ. ಚೋಪ್ರಾನನ್ನು ನಂಬಿದ್ದ ಈಕೆ, ಆತ ತನ್ನನ್ನು ಭೇಟಿ ಮಾಡಲು ಬರುತ್ತಿದ್ದಾನೆ ಎಂದು ಭಾವಿಸಿ ಕೇಳಿದಷ್ಟು ಮೊತ್ತವನ್ನು ತನಗೆ ನೀಡಿದ್ದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ಇದರ ಬೆನ್ನಿಗೇ ಈ ವ್ಯವಹಾರಕ್ಕೆ ಜಿಎಸ್‌ಟಿ ಪಾವತಿ ಮಾಡುವಂತೆಯೂ ಕೇಳಲಾಗಿದೆ.

ಆದರೆ ಆರು ಲಕ್ಷ ರೂ.ಗಳನ್ನು ಜಿಎಸ್‌ಟಿ ರೂಪದಲ್ಲಿ ಕೇಳಿದಾಗ ಅನುಮಾನಗೊಂಡ ಮಹಿಳೆ, ಈ ಕುರಿತಂತೆ ಹೆಚ್ಚಿನ ಸ್ಪಷ್ಟತೆ ಕೇಳುತ್ತಲೇ ಆ ಕಡೆಯಿಂದ ಕರೆಯನ್ನು ಕಡಿತಗೊಳಿಸಲಾಗಿದೆ. ಇದಾದ ಬೆನ್ನಿಗೇ ಪದೇ ಪದೇ ಕರೆ ಮಾಡಲು ಯತ್ನಿಸಿದರೂ ಸಹ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಚೋಪ್ರಾ ಹೆಸರಿನಲ್ಲಿ ಟಿಂಡರ್‌ನಲ್ಲಿದ್ದ ಖಾತೆ ನಿಷ್ಕ್ರಿಯಗೊಂಡಿರುವುದು ಸಹ ಈಕೆಗೆ ಕೂಡಲೇ ತಿಳಿದುಬಂದಿದೆ. ಈ ಸಂಬಂಧ ಟಿಂಡರ್‌ನ ಗ್ರಾಹಕ ಬೆಂಬಲಕ್ಕೆ ಕರೆ ಮಾಡಲು ಯತ್ನಿಸಿದರೂ ಏನೂ ಪ್ರಯೋಜನವಾಗಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read