ಬೆಂಗಳೂರು: ಬೆಂಗಳೂರಿನಲ್ಲಿ ಭಾರಿ ಗಾಳಿ ಮಳೆಗೆ ಆಟೋ ಚಾಲಕ ಬಲಿಯಾಗಿದ್ದಾನೆ. ಆಟೋ ಮೇಲೆ ಭಾರೀ ಗಾತ್ರದ ಮರ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯ ಎಂಎಂ ಬಾರ್ ಸಮೀಪ ಘಟನೆ ನಡೆದಿದೆ.
ಇಟ್ಟಮಡು ನಿವಾಸಿ ಮಹೇಶ(45) ಮೃತಪಟ್ಟ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ ಶುರುವಾಗಿದ್ದು, ರಿಚ್ಮಂಡ್ ಸರ್ಕಲ್, ಶಾಂತಿನಗರ, ಕಾರ್ಪೊರೇಷನ್, ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ಸೇರಿದಂತೆ ಹಲವು ಕಡೆ ಮಳೆಯಾಗತೊಡಗಿದೆ. ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ಇನ್ನು ಬೆಂಗಳೂರಿನಲ್ಲಿ ಮುಂದಿನ ಮೂರು ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ. ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.