ಬೆಂಗಳೂರು: ಬೆಂಗಳೂರು ಮಹಾನಗರವನ್ನು ಐದು ಭಾಗಗಳಾಗಿ ವಿಭಜಿಸುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಎಚ್ಚರಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿಯನ್ನು ಜಿಬಿಎ ಕಾಯ್ದೆ ಅಡಿಯ 5 ಪಾಲಿಕೆಯಾಗಿ ವಿಭಜನೆ ಮಾಡುತ್ತಿರುವುದು ಕನ್ನಡಿಗರ ಅಸ್ತಿತ್ವಕ್ಕೆ ಮಾರಕವಾಗುತ್ತದೆ. ಬೆಂಗಳೂರನ್ನು ಐದು ಭಾಗ ಮಾಡುವುದರಿಂದ ಪರಭಾಷಿಕರ ಹಾವಳಿ ಹೆಚ್ಚಾಗುತ್ತದೆ. ಸರ್ಕಾರ ತಕ್ಷಣ ಈ ನಿರ್ಧಾರ ಹಿಂಪಡೆಯದಿದ್ದರೆ ಬೆಂಗಳೂರು ಬಂದ್ ಗೆ ಕರೆ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಮಹಾನಗರವನ್ನು ಐದು ಭಾಗ ಮಾಡುವುದರಿಂದ ಪ್ರತಿಷ್ಠೆಗೆ ಕುಂದಾಗುತ್ತದೆ. ಮಹಾನಗರವನ್ನು ತಾಲೂಕು ಮಟ್ಟಕ್ಕೆ ಇಳಿಸುವುದು ಸರಿಯಲ್ಲ, ಐದು ಮಹಾನಗರ ಪಾಲಿಕೆ ರಚನೆ ಮಾಡುವುದರ ಬದಲು ಬಿಬಿಎಂಪಿಗೆ ಚುನಾವಣೆ ನಡೆಸಬೇಕು. ಸ್ಥಳೀಯ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ಬೆಂಗಳೂರು ಮಹಾನಗರವನ್ನು ಐದು ಭಾಗಗಳಾಗಿ ವಿಭಜಿಸುವ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ.