ಬೆಂಗಳೂರು: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲೆಯ ಬಸ್ ಭೀಕರ ಅಪಘಾತಕ್ಕೀಡಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಲಕ್ಷ್ಮೀಪುರ ಬಳಿ ಈ ಘಟನೆ ನಡೆದಿದೆ. ಚಾಲಕನ ಓವರ್ ಸ್ಪೀಡ್ ನಿಂದಾಗಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಬಂದ ಬಸ್ ಮೊದಲಿಗೆ ಐಷರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಚಾಲಕನ ನಿಯಂಯ್ರಣ ಕಳೆದುಕೊಂಡ ಬಸ್ ಹೋಟೆಲ್ ಗೋಡೆಗೆ ಗುದ್ದಿದೆ.
ಘಟನೆಯಲ್ಲಿ ಕೆಲ ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಬಸ್ನ ಮುಂಭಾಗ ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನ್ಯೂ ಆಕ್ಸ್ ಫರ್ಡ್ ಪಬ್ಲಿಕ್ ಶಾಲೆಗೆ ಸೇರಿದ ಬಸ್ ಇದಾಗಿದ್ದು ಚಾಲಕ ಓವರ್ ಸ್ಪೀಡ್ ಆಗಿ ವಾಹನ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ಬಸ್ ಚಾಲಕ ನಾರಾಯಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.