ಬೆಂಗಳೂರು: ಬೆಂಗಳೂರಿನಲ್ಲಿ ಎಟಿಎಂಗೆ ಹಣ ತುಂಬಲು ಹೊರಟಿದ್ದ ವಾಹನವನ್ನು ತಡೆದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳ ಸೋಗಿನಲ್ಲಿ 7.11 ಕೋಟಿ ಹಣ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ದರೋಡೆಕೋರರ ಪತ್ತೆಗಾಗಿ ಬಲೆ ಬೀಸಲಾಗಿದೆ. ದರೋಡೆ ಕೃತ್ಯದ ಬಳಿಕ ಆರೋಪಿಗಳು ಹೊಸಕೋಟೆ ಮಾರ್ಗವಾಗಿ ಸಾಗಿರುವ ಸಾಧ್ಯತೆ ಇದೆ.
ಡೇರಿ ವೃತ್ತ, ಕೋರಮಂಗಲ, ದೊಮ್ಮಲೂರು, ಮಾರತ್ ಹಳ್ಳಿ, ವೈಟ್ ಫೀಲ್ಡ್ ಮಾರ್ಗವಾಗಿ ದರೋಡೆಕೋರರು ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ದರೋಡೆಕೋರರಿದ್ದ ಕಾರು ಟೋಲ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಿಎಂಎಸ್ ಏಜೆನ್ಸಿ ವಾಹನ ಚಾಲಕ ಬಿನೋದ್ ಕುಮಾರ್, ಭದ್ರತಾ ಸಿಬ್ಬಂದಿ ರಾಜಣ್ಣ, ತಮ್ಮಯ್ಯ, ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಅಫ್ತಾಬ್ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
