ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೋರ್ವ ಪೊಲೀಸನೇ ಕಳ್ಳನಾಗಿರುವ ಘಟನೆ ನಡೆದಿದೆ. ಪೊಲೀಸ್ ಹೆಡ್ ಕಾನ್ಸ್ ಟೆಬಲ್ ಓರ್ವ ಆರೋಪಿ ಬಳಿ ಇದ್ದ ಹಣ ಕದ್ದು ಪತ್ನಿಗೆ ಒಡವೆ ಕೊಡಿಸಿ, ಉಳಿದ ಹಣವನ್ನು ಮನೆಯಲ್ಲಿ ಮಂಚದಡಿಗೆ ಬಚ್ಚಿಟ್ಟಿರುವ ಆರೋಪ ಕೇಳಿಬಂದಿದೆ.
ಪೊಲೀಸ್ ಹೆಡ್ ಕಾನ್ಸ್ ಟೇಬಲ್ ನಿಂದಲೇ ಕಾರಿನಲ್ಲಿ ಹಣವಿದ್ದ ಬ್ಯಾಗ್ ಕಳ್ಳತನವಾಗಿದೆ. ಸೈಬರ್ ಪ್ರಕರಣದ ಆರೋಪಿ ಬಂಧನದ ವೇಳೆ ಹಣ ಕಳುವಾಗಿದೆ. ಸಿಸಿಬಿ ಪೊಲೀಸರು ಸೈಬರ್ ಕಳ್ಳನನ್ನು ಬಂಧಿಸಿ ಆರೊಪಿ ಕಾರನ್ನು ಕಮೀಷನರ್ ಕಚೇರಿ ಬಳಿ ನಿಲ್ಲಿಸಿದ್ದರು. ಈ ವೇಳೆ ಕಾರಿನ ಬ್ಯಾಗ್ ನಲ್ಲಿ ಆರೋಪಿ 11 ಲಕ್ಷ ಹಣವಿಟ್ಟಿದ್ದ. ಈ ಹಣವಿದ್ದ ಬ್ಯಾಗ್ ನ್ನು ಹೆಡ್ ಕಾನ್ಸ್ ಟೇಬಲ್ ಜಬಿವುಲ್ಲಾ ಕಳುವು ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಹಣ ಕದ್ದು ತನಗೇನೂ ಗೊತ್ತಿಲ್ಲದಂತೆ ಕಾನ್ಸ್ ಟೇಬಲ್ ಜಬಿವುಲ್ಲಾ ನಾಟಕವಾಡಿದ್ದಾನೆ. ಜೈಲು ಸೇರಿದ್ದ ಆರೋಪಿ ಸೈಬರ್ ಕಳ್ಳ ಜಾಮೀನು ಪಡೆದು ಹೊರಬಂದಿದ್ದಾನೆ. ಕಾರಿನಲ್ಲಿದ್ದ ಹಣದ ಬ್ಯಾಗ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಆರೋಪಿ ಸೈಬರ್ ಪೊಲೀಸರ ಬಳಿ ಪ್ರಶ್ನಿಸಿದ್ದಾನೆ. ಆರೋಪಿ ಪ್ರಶ್ನೆಗೆ ಗಾಬರಿಯಾದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಹಣದ ಬ್ಯಾಗ್ ಕಾನ್ಸ್ ಟೇಬಲ್ ಜಬಿವುಲ್ಲಾ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ. ಸಿಸಿ ಕ್ಯಾಮರಾದಲ್ಲಿ ಹಣದ ಬ್ಯಾಗ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
ಬರೋಬ್ಬರಿ 11 ಲಕ್ಷ ಹಣವನ್ನು ಕದ್ದು ಕಾನ್ಸ್ ಟೇಬಲ್ ಏನೂ ಗೊತ್ತಿಲ್ಲದಂತೆ ಆರಾಮವಾಗಿ ಓಡಾಡಿಕೊಂಡಿದ್ದ. ಘಟನೆ ಬಗ್ಗೆ ಸಿಸಿಬಿ ಡಿಸಿಪಿ ರಾಜಾ ಇಮಾಮ್ ಖಾಸಿಂ ತನಿಖೆಗೆ ಸೂಚಿಸಿದ್ದರು. ಕಾನ್ಸ್ ಟೆಬಲ್ ಜಬಿವುಲ್ಲಾ ಮನೆ ಸರ್ಚ್ ಮಾಡಿದಾಗ ಬೆಡ್ ಕೆಳಗೆ ಹಣ ಜೋಡಿಸಿಟ್ತಿರುವುದು ಪತ್ತೆಯಾಗಿದೆ. ಕದ್ದ ಕೆಲ ಹಣದಲ್ಲಿ ಪತ್ನಿಗೆ ಒಡವೆಗಳನ್ನು ಖರೀದಿ ಮಾಡಿ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿ ಹೆಡ್ ಕಾನ್ಸ್ ಟೇಬಲ್ 2 ಲಕ್ಷ ಹಣವನ್ನು ವಾಪಸ್ ಕೊಟ್ಟಿದ್ದಾನೆ. ಉಳಿದ ಹಣವನ್ನೂ ವಾಪಸ್ ಕೊಡುವಂತೆ ಪೊಲೀಸರು ತಾಕೀತು ಮಾಡಿದ್ದಾರೆ. ಘಟನೆ ಬಗ್ಗೆ ಮೇಲಧಿಕಾರಿಗಳಿಗೆ ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
