ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ. ರಾಜಧಾನಿ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಂಗಳೂರಿನಲ್ಲಿ ಸಂಜೆಯಾಗುತ್ತಿದ್ದಂತೆಯೇ ಗುಡುಗು, ಮಿಂಚು ಸಹಿತ ವರುಣಾರ್ಭಟ ಜೋರಾಗಿದ್ದು, ಪ್ರಮುಖ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದೆ. ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್, ವಿಧಾನಸೌಧ, ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ವೃತ್ತ, ಕಾರ್ಪೊರೇಷನ್, ಶಾಂತಿನಗರ, ರಿಚ್ಮಂಡ್ ಟೌನ್, ಜಯನಗರ, ಆರ್.ಆರ್.ನಗರ, ಗಿರಿನಗರ, ಮೈಸೂರು ರಸ್ತೆ, ಹೊಸಕೆರೆಹಳ್ಳಿ, ರಾಜಾಜಿನಗರ ಸೇರಿದಂತೆ ಮಹಾನಗರದಾದ್ಯಂತ ಭಾರಿ ಮಳೆಯಾಗುತ್ತಿದೆ.
ವರುಣಾರ್ಭಟಕ್ಕೆ ವಿಧಾನಸೌಧದ ಬಳಿ ಜನರು ಪೆಂಡಾಲ್ ಕೆಳಗೆ ಆಶ್ರಯ ಪಡೆದಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೆಂಡಾಲ್ ಹಾಕಲಾಗಿತ್ತು. ಧಾರಾಕಾರ ಮಳೆಯಿಂದಾಗಿ ಜನರು ಪೆಂಡಾಲ್ ಕೆಳಗೆ ಆಶ್ರಯ ಪಡೆದಿದ್ದಾರೆ.
ಇನ್ನು ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ, ಕೊಡಗು ಸೇರಿದಂತೆ ಹಲವೆಡೆ ಬಿರುಗಾಳಿ, ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.