ಬೆಂಗಳೂರು: ಬೆಂಗಳೂರಿನಲ್ಲಿ ವಿಕೃತ ಕಾಮಿಯೊಬ್ಬನನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯರಿಗೆ ಖಾಸಗಿ ಅಂಗ ತೋರಿ ವಿಕೃತವಾಗಿ ವರ್ತಿಸುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ತಿಕ್ ಎಂದು ಗುರುತಿಸಲಾಗಿದೆ.
ಏ.13ರಂದು ಕ್ವೀನ್ಸ್ ರಸ್ತೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ರಾತ್ರಿ ಮಹಿಳೆ ತನ್ನ ಪತಿಯೊಂದಿಗೆ ಊಟ ಮುಗಿಸಿ ಎರಡನೆ ಮಹಡಿಗೆ ತೆರಳುತ್ತಿದ್ದ ವೇಳೆ ಎದುರು ಮನೆಯಲ್ಲಿದ್ದ ಕಾಮುಕ ಕಾರ್ತಿಕ್, ತನ್ನ ಖಾಸಗಿ ಅಂಗ ಪ್ರದರ್ಶಿಸಿ ವಿಕೃತಿ ಮೆರೆದಿದ್ದ. ಪ್ರಶ್ನೆ ಮಾಡಿ ಬೈದಿದ್ದಕ್ಕೆ ಮಹಿಳೆಯ ಪತಿ ಮೇಲೆ ಹಲ್ಲೆ ನಡೆಸಿದ್ದ. ಬಿಡಿಸಲು ಬಂದ ಅಕ್ಕಪಕ್ಕದ ಮನೆಯವರ ಮೇಲೂ ದಾಳಿ ನಡೆಸಿ ಹೂವಿನ ಪಾಟ್ ಗಳನ್ನು ಎತ್ತಿ ಅವರ ಮೇಲೆ ಬಿಸಾಕಿ ಪರಾರಿಯಾಗಿದ್ದ.
ಘಟನೆಯಲ್ಲಿ 7 ಜನರು ಗಾಯಗೊಂಡಿದ್ದರು. ಶಿವಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕಾರ್ತಿಕ್ ನನ್ನು ಬಂಧಿಸಿ ಜೈಲಿಗಟ್ಟಲಾಗಿದೆ.