ಬೇಲೂರು: ದೇವಾಲಯದಲ್ಲಿರುವ ಗಣಪತಿ ಮೂರ್ತಿಗೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಬೇಲೂರು ಪಟ್ಟಣದ ಪುರಸಭೆಯ ಶ್ರೀ ವರಸಿದ್ಧಿ ವಿನಾಯಕ ದೇವಾಲಯದಲ್ಲಿ ಈ ಘಟನೆ ನಡೆದಿದೆ. ದೇವಾಲಯದಲ್ಲಿರುವ ಗಣಪತಿ ಮೂರ್ತಿಗೆ ನೀಚರ್ಯಾರೋ ಎರಡು ಚಪ್ಪಲಿ ಇಟ್ಟು ಹೋಗಿದ್ದಾರೆ. ಇಂದು ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ಬಂದಾಗ ದೇವರ ಮೇಲಿದ್ದ ಚಪ್ಪಲಿ ಕಂಡು ಆಘಾತಗೊಂಡಿದ್ದಾರೆ.
ದೇವರೆಂದು ಪೂಜಿಸುವ ಪ್ರತಮ ಪೂಜ್ಯ ಗಣಪತಿ ಮೂರ್ತಿಗೆ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆಯಲಾಗಿದ್ದು, ಇಂತಹ ನೀಚರನ್ನು ಬಂಧಿಸಬೇಕು ಎಂದು ಭಕ್ತರು, ಸಾರ್ವಜನಿಕರು ಆಗ್ರಹಿಸಿದ್ದಾರೆ.
ದೇವಸ್ಥಾನದ ಬಳಿ ಸ್ಥಳೀಯರು, ಸಾರ್ವಜನಿಕರು, ಭಕ್ತರು ಪ್ರತಿಭಟನೆ ನಡೆಸಿದ್ದು, ಚಪ್ಪಲಿ ಹಾರ ಹಾಕಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಎಸ್ ಪಿ ಮೊಹಮ್ಮದ್ ಸುಜೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಬಲೆಬೀಸಲಾಗಿದೆ.