
ಬೆಳಗಾವಿ: ಆಸ್ತಿ ಆಸೆಗಾಗಿ ಸ್ವಂತ ತಮ್ಮನನ್ನೇ ಹತ್ಯೆ ಮಾಡಿದ್ದ ಅಣ್ಣನನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ಪೊಲೀಸರು ಬಂಧಿಸಿದ್ದಾರೆ.
ಸವದತ್ತಿ ತಾಲೂಕಿನ ಗೊರವನಕೊಳ್ಳ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಅಣ್ಣ ಸಿದ್ದಪ್ಪ ಅಳಗೋಡಿ ತಮ್ಮ ಮಹಂತೇಶ್ ಅಳಗೋಡಿಯನ್ನು ಕೊಲೆ ಮಾಡಿದ್ದ. ತನ್ನದೇ ಜಮೀನಿನಲ್ಲಿ ಕೆಲಸ ಮಡುತ್ತಿದ್ದ ಬಾಬು ಲಮಾಣಿ ಎಂಬಾತನ ಜೊತೆ ಸೇರಿ ಸಹೋದರನ್ನೇ ಹತ್ಯೆ ಮಾಡಿದ್ದ.
ತಮ್ಮನನ್ನು ಕರೆದು ಕಂಠಪೂರ್ತಿ ಕುಡಿಸಿ ಬಳಿಕ ಟವೆಲ್ ನಿಂದ ಕತ್ತು ಬಿಗಿದು ಅಣ್ಣ ಸಿದ್ದಪ್ಪ ಕೊಲೆ ಮಾಡಿದ್ದ. ಬಳಿಕ ಕಾಲುವೆಯೊಂದರ ಬಳಿ ಮೃತದೇಹ ಎಸೆದು ಬೈಕ್ ಬೀಳಿಸಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲಾಗಿತ್ತು. ಸವದತ್ತಿ ಠಾಣೆಯಲ್ಲಿ ಅಪಘಾತ ಎಂದು ದೂರು ದಾಖಲಾಗಿತ್ತು.
ಮೃತದೇಹದ ಕತ್ತಲ್ಲಿ ಇರುವ ಕಪ್ಪು ಕಲೆ ಕಂಡು ಅನುಮಾನಗೊಂಡ ಪೊಲೀಸರು ತನಿಖೆ ನಡೆಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ಸಾಬೀತಾಗಿತ್ತು. ಮನೆ ಕೆಲಸದವರನ್ನು ಕರೆದು ವಿಚಾರಣೆ ನಡೆಸಿದಾಗ ಕೊಲೆ ವಿಚಾರ ಬಾಯ್ಬಿಟ್ಟಿದ್ದರು.
ಮೃತನ ಅಣ್ಣ ಸಿದ್ದಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಆಸ್ತಿಗಾಗಿ ತಮ್ಮನನ್ನು ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸಿದ್ದಪ್ಪನ ಜೊತೆ ಬಾಬು ಲಮಾಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
