ಬೆಳಗಾವಿ: ವಾಟರ್ ಪಂಪ್ , ಕೇಬಲ್ ಕಳ್ಳತನ ಮಾಡುತ್ತಿದ್ದಗಲೇ ಕಳ್ಳರ ಗುಂಪು ಜನರ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಸರಗುಪ್ಪಿ ಗ್ರಾಮದಲ್ಲಿ ನಡೆದಿದೆ.
ಬೆಳ್ಳಂಬೆಳಿಗ್ಗೆ ನಾಲ್ವರು ಖದೀಮರು, ಮಸರಗುಪ್ಪಿ ಹೊರವಲಯದ ಬಾವಿಯ ಬಳಿ ಅಳವಡಿಸಲಾಗಿದ್ದ ಪಂಪ್ ಸೆಟ್ ಹಾಗೂ ಕೇಬಲ್ ಕಳುವು ಮಾಡುತ್ತಿದ್ದರು. ಇದನ್ನು ಗಮನಿಸಿದ ಗ್ರಾಮಸ್ಥರು ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಮೂವರು ಕಳ್ಳರು ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸೆರೆಹಿಡಿದ ಗ್ರಾಮಸ್ಥರು ಕಳ್ಲನನ್ನು ವಿಚಾರಿಸಿದಾಗ ಆತನ ಜೊತೆ ಐವರು ಇದ್ದು, ಇಬ್ಬರು ಬೆಳಗಾವಿ ಮೂಲದವರು ಹಾಗೂ ಮೂವರು ಮಹಾರಾಷ್ಟ್ರ ಮೂಲದವರು ಎಂದು ಬಾಯ್ಬಿಟ್ಟಿದ್ದಾನೆ. ಒಂದು ವರ್ಷದಿಂದ ಕಳ್ಳತನವನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ. ಕಳ್ಳನನ್ನು ಹಿಡಿದ ಗ್ರಾಮಸ್ಥರು ಅಥಣಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸದ್ಯ ಆರೋಪಿ ದುರ್ಗಪ್ಪ ಕುಂಚಿಕುರವಿಯನ್ನು ಪೊಲೀಸರು ಬಂಧಿಸಿದ್ದು, ಪರಾರಿಯಾಗಿರುವ ಐವರಿಗಾಗಿ ಹುಡುಕಾಟ ನಡೆಸಿದ್ದಾರೆ.