ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಲಪ್ರಭ ನದಿಯಲ್ಲಿ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹಲವೆಡೆ ರಸ್ತೆಗಳು ಜಲಾವೃತವಾಗಿದ್ದರೆ, ಇನ್ನು ಕೆಲವೆಡೆ ನೀರಿನ ರಭಸಕ್ಕೆ ರಸ್ತೆಗಳೇ ಕೊಚ್ಚಿ ಹೋಗಿವೆ.
ಮಳೆ ಅವಾಂತರದಿಂದಾಗಿ ಬೆಳಗಾವಿ-ಗೋವಾ ಸಂಪರ್ಕ ಮಾರ್ಗ ಬಂದ್ ಆಗಿದೆ. ಖಾನಾಪುರ ತಾಲೂಕಿನ ಕಣಕಂಬಿ ಮಲಪ್ರಭಾ ನದಿ ಉಗಮಸ್ಥಾನ. ಇದೇ ಮಾರ್ಗದ ಕಸಮಳಿ ಬಳಿ ನದಿಗೆ ಅಡ್ದಲಾಗಿ ಸೇತುವೆ ನಿರ್ಮಾಣ ಕಾಮಗರಿ ನಡೆಯುತ್ತಿದೆ. ನದಿಯಲ್ಲಿ ಏಕಾಏಕಿ ನೀರು ಹೆಚ್ಚವಾಗಿರುವುದರಿಂದ ಮಣ್ಣಿನ ರಸ್ತೆ ಕೊಚ್ಚಿ ಹೋಗಿದೆ. ಸಂಚಾರ ಸ್ಥಗಿತಗೊಂಡಿದೆ.
ಬೆಳಗಾವಿ, ಜಾಂಬೋಟಿ, ಚೋರ್ಲಾ ಮಾರ್ಗವಾಗಿ ಗೋವಾಕ್ಕೆ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ಇದೀಗ ಹೆದ್ದಾರಿ ಬಂದ್ ಮಾಡಲಾಗಿದೆ. ಇಲ್ಲಿನ ನಿರ್ಮಾಣ ಹಂತದ ಸೇತುವೆ ಭಾಗಶಃ ಮುಳುಗಡೆಯಾಗಿವೆ. ಇದರಿಂದಾಗಿ ಬೆಳಗಾವಿ, ಖಾನಾಪುರ, ರಾಮನಗರ ಮಾರ್ಗವಾಗಿ ಜನರು ಗೋವಕ್ಕೆ ತೆರಳುತ್ತಿದ್ದಾರೆ. ಈ ಬಾರಿಯ ಮಳೆಗಾಲ ಮುಗಿಯುವವರೆಗೂ ಈ ಮಾರ್ಗ್ ಬಂದ್ ಆಗುವ ಸಾಧ್ಯತೆ ಇದೆ.
ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬೆಳಗಾವಿ ಹಲವೆಡೆ ಸೇತುವೆಗಳು ಮುಳುಗಡೆಯಾಗಿವೆ. ಕೃಷಿ ಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ.