ಬೆಳಗಾವಿ: ಒಂದು ಟನ್ ಕಬ್ಬಿಗೆ 3500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಬಳಿ ಒಂಡೆಡೆ ರೈತರು ರಸ್ತೆ ತಡೆ ನಡೆಸಿ ಗಾಜಿನ ಮೇಲೆ ಉರುಳು ಸೇವೆ ಮಾಡುವ ಮೂಲಕ ಹೋರಾಟ ತೀವ್ರಗೊಳಿಸಿದ್ದಾರೆ.
ಮತ್ತೊಂದೆಡೆ ಹತ್ತರಗಿ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿರುವ ರೈತರು ರಸ್ತೆಯಲ್ಲಿ ಟ್ರ್ಯಾಕ್ಟರ್ ಗಳನ್ನು ಅಡ್ಡಲಾಗಿ ನಿಲ್ಲಿಸಿ ಹೋರಾಟ ನಡೆಸುತ್ತಿದ್ದಾಎ. ಮತ್ತೊಂದೆಡೆ ಬಾರುಕೋಲು ಚಳುವಳಿ ಮೂಲಕ ಸರ್ಕಾರಕ್ಕೆ ಚಾಟಿ ಬೀಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಗುರ್ಲಾಪುರ ಕ್ರಾಸ್ ಬಳಿ ಪ್ರತ್ಭಟನೆಯ ವೇಳೆ ರೈತ ಸುರೇಶ್ ಎಂಬುವವರು ಒಡೆದ ಗಾಜುಗಳ ಮೇಲೆ ಅರೆಬೆತ್ತಲಾಗಿ ಉರುಳು ಸೇವೆ ಮಾಡುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ನೋವು- ಸಂಕಷ್ಟಕ್ಕೆ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.
ಇದೇ ವೇಳೆ ಬೆಳಗಾವಿ ಜಿಲ್ಲೆಯಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಳ್ಳುತ್ತಿದ್ದು ನಿಪ್ಪಾಣಿ ರಸ್ತೆಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ.
