ಬೆಳಗಾವಿ: ಬೆಳಗಾವಿಯಲ್ಲಿ ನಡೆದಿದ್ದ ಕನ್ನಡ ರಾಜ್ಯೋತ್ಸವ ದಿನದಂದು ಕರಾಳದಿನಾಚರಣೆಗೆಂದು ಬಂದು ನಿಷೇಧವಿದ್ದರೂ ಮೆರವಣಿಗೆ ನಡೆಸಿ ಪುಂಡಾಟ ಮೆರೆದಿದ್ದ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಎತ್ತಂಗಡಿ ಮಾಡಲಾಗಿದೆ.
ಕನ್ನಡ ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ನಿಷೇಧವಿದ್ದರೂ ಕರಾಳದಿನಾಚರಣೆ, ಮೆರವಣಿಗೆ ನಡೆಸಿದ್ದರು. ಹೀಗೆ ಪುಂಡಾಟ ನಡೆಸಲು ನೇತೃತ್ವ ವಹಿಸಿದ್ದ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಕಾಲೆಮಿರ್ಚಿ ಸೆಲ್ಫಿ ಫೋಟೋ ತೆಗೆದುಕೊಂಡು ಪೋಸ್ ನೀಡಿದ್ದರು.
ಸಿಪಿಐ ನಡೆ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲಿಯೂ ಸಿಪಿಐ ವಿರುದ್ಧ ಕ್ರಮಕ್ಕೆ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಸಿಪಿಐ ಕಾಲೇಮಿರ್ಚಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಯಾವುದೇ ಸ್ಥಳ ನಿಯೋಜನೆ ಮಾಡದೇ ಎತ್ತಂಗಡಿ ಮಾಡಲಾಗಿದೆ. ಕಾಲೇಮಿರ್ಚಿ ಜಾಗಕ್ಕೆ ಸಿಪಿಐ ಬಿ.ಆರ್.ಗಡೇಕರ್ ಅವರನ್ನು ನೇಮಕ ಮಾಡಲಾಗಿದೆ.
