ಬೆಳಗಾವಿ: ಮೂರು ವರ್ಷದ ಮಗನನ್ನೇ ಹತ್ಯೆ ಗೈದಿದ್ದ ತಂದೆ ಸೇರಿ ನಾಲ್ವರು ಆರೋಪಿಗಳನ್ನು ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾರ್ತಿಕ್ ಮುಕೇಶ್ ಮಾಜಿ ಎಂಬ ಮೂರು ವರ್ಷದ ಬಾಲಕನನ್ನು ಮಲತಂದೆ ಹಾಗೂ ಆತನ ಸ್ನೇಹಿತರು ಒಲೆಯಲ್ಲಿದ್ದ ಸೌದೆಯಿಂದ ಸುಟ್ಟು, ಮನಬಂದಂತೆ ಹೊಡೆದು ಸಾಯಿಸಿದ್ದರು. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರಗೊಪ್ಪದಲ್ಲಿ ಘಟನೆ ನಡೆದಿತ್ತು.
ಮಗುವಿನ ದಾಯಿ ರಂಗೀಲಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಬೈಲಹೊಂಗಲದ ಬಳಿ ಫ್ಯಾಕ್ಟರಿಯಲ್ಲಿ ಬಿಹಾರ ಮೂಲದ ಮಹಿಳೆ ಕೆಲಸ ಮಾಡುತ್ತಿದ್ದರು. ಮಹಿಳೆ ರಂಗೀಲಾ ಮಹೇಶ್ವರ್ ನನ್ನು ಎರಡನೇ ಮದುವೆಯಾಗಿದ್ದಳು. ತನ್ನ ಜೊತೆ ಮೊದಲ ಪತಿಯ ಮಗು ಮೂರು ವರ್ಷದ ಕಾರ್ತಿಕ್ ನನ್ನು ಕರೆತಂದಿದ್ದಳು.
ಕಂಠಪೂರ್ತಿ ಕುಡಿದು ಬಂದ ಮಹೇಶ್ವರ್ ನಿನ್ನ ಜೊತೆ ಮಗನನ್ನು ಯಾಕೆ ತಂದಿದ್ದೀಯಾ ಎಂದು ಜಗಳವಾಡಿದ್ದ. ಗಂಡನ ಜೊತೆ ಆತನ ಮೂವರು ಸ್ನೇಹಿತರು ಸೇರಿ ರಂಗೀಲಾ ಮೇಲೆ ಹಲ್ಲೆ ನಡೆಸಿದ್ದಾರೆ. ಮೂರು ವರ್ಷದ ಮಗನನ್ನು ಬಿಟ್ಟು ಓಡಿ ಹೋಗಿ ಮಹಿಳೆ ತಪ್ಪಿಸಿಕೊಂಡಿದ್ದಾಳೆ. ಮಹಿಳೆ ತಪ್ಪಿಸಿಕೊಳ್ಳುತ್ತಿದ್ದಂತೆ ಅಲ್ಲ್ಯೇ ಇದ್ದ ಮೂರು ವರ್ಷದ ಮಗ ಕಾರ್ತಿಕ್ ಮೇಲೆ ಮಲತಂದೆ ಹಾಗು ಆತನ ಸ್ನೇಹಿತರು ಮೃಗೀಯವಾಗಿ ವರ್ತಿಸಿದ್ದಲ್ಲದೇ ಕಟ್ಟಿಗೆಯಿಂದ ಹೊಡೆದು ಹೊಡೆದಿ ಸಾಯಿಸಿದ್ದಾರೆ. ರಗೀಲಾ ಮನೆಗೆ ಬಂದು ನೋಡುವಷ್ಟರಲ್ಲಿ ರಕ್ತದ ಮಡುವಲ್ಲಿ ಮಗ ಹೆಣವಾಗಿ ಬಿದ್ದಿದ್ದಾನೆ. ತಕ್ಷಣ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ಸಂಬಂಧ ಮುರಗೋಡ ಠಾಣೆ ಪೊಲೀಸರು ರಂಗೀಲಾ ಪತಿ ಮಹೇಶ್ವರ್ ಮಾಂಜಿ, ರಾಕೇಶ್ ಮಾಂಜಿ, ಶ್ರೀನಾಥ್ ಮಾಂಜಿ, ಮಹೇಶ್ ಎಂಬ ನಾಲ್ವರನ್ನು ಬಂಧಿಸಲಾಗಿದೆ.