ಬೆಂಗಳೂರು : ಅವಸರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗ್ತೀರಾ…! ಬೇಗ ಬರ್ತೀನಿ ಅಂತ ಕಂಡ ಕಂಡಲ್ಲಿ ವಾಹನ ನಿಲ್ಲಿಸಿ ಹೋದರೆ..ವಾಪಸ್ ಬರುವಾಗ ನಿಮ್ಮ ಗಾಡಿ ಇರಲ್ಲ… ಹೌದು. ಎಲ್ಲೆಂದರಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವವರಿಗೆ ಸಂಚಾರಿ ಪೊಲೀಸರು ಮತ್ತೆ ಶಾಕ್ ನೀಡಲಿದ್ದಾರೆ. ರಾಜ್ಯದಲ್ಲಿ ಮತ್ತೆ ವಾಹನಗಳ ಟೋಯಿಂಗ್ ಆರಂಭವಾಗಲಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್, ರಾಜ್ಯದಲ್ಲಿ ಟೋಯಿಂಗ್ ಆರಂಭಿಸುವುದಾಗಿ ಸರ್ಕಾರ ಈಗಾಗಲೇ ಸುಳಿವು ನೀಡಿತ್ತು. ಆಗಸ್ಟ್ ಅಂತ್ಯಕ್ಕೆ ರಾಜ್ಯದಲ್ಲಿ ಮತ್ತೆ ಟೋಯಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು.
ರಸ್ತೆಗಳನ್ನು ಮಾಡುವುದು ಜನರು ಓಡಾಡಲಿ ಎಂದು, ಆದರೆ ರಸ್ತೆಗಳಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕಕಡೆಗಳಲ್ಲಿ ಮುಖ್ಯರಸ್ತೆಗಳಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಟೋಯಿಂಗ್ ಕ್ರಮ ಮತ್ತೆ ಜಾರಿಯಾಗುತ್ತಿದೆ ಎಂದು ಹೇಳಿದರು.
ಈ ಬಾರಿ ಗುತ್ತಿಗೆ ನೀಡಲ್ಲ. ಇಲಾಖೆಯಿಂದಲೇ ಟೋಯಿಂಗ್ ನಡೆಯಲಿದೆ. ಪಾರ್ಕಿಂಗ್ ಸಮಸ್ಯೆ ತಲೆನೋವಾಗಿದೆ. ರಸ್ತೆಗಳಲ್ಲಿ ನಿಲ್ಲಿಸುವ ವಾಹನಗಳ ಟೋಯಿಂಗ್ ಮಾಡಲಾಗುತ್ತದೆ. ಪೊಲೀಸರಿಗೆ ಜನರೊಂದಿಗೆ ಮಾನವೀಯತೆಯಿಂದ ವರ್ತಿಸಲು, ಶಾಂತಿಯಿಂದ ವರ್ತಿಸಲು ಸೂಚಿಸಲಾಗಿದೆ. ಜಟಾಪಟಿ ನಡೆದರೆ ಕಾನೂನು ಇದೆ ಎಂದು ತಿಳಿಸಿದರು.