ಬೆಂಗಳೂರು : ಅವಸರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗ್ತೀರಾ…! ಬೇಗ ಬರ್ತೀನಿ ಅಂತ ಕಂಡ ಕಂಡಲ್ಲಿ ವಾಹನ ನಿಲ್ಲಿಸಿ ಹೋದರೆ..ವಾಪಸ್ ಬರುವಾಗ ನಿಮ್ಮ ಗಾಡಿ ಇರಲ್ಲ… ಹೌದು. ಎಲ್ಲೆಂದರಲ್ಲಿ ರಸ್ತೆ ಬದಿ ವಾಹನಗಳನ್ನು ನಿಲ್ಲಿಸುವವರಿಗೆ ಸಂಚಾರಿ ಪೊಲೀಸರು ಮತ್ತೆ ಶಾಕ್ ನೀಡಲಿದ್ದಾರೆ. ಬೆಂಗಳೂರಲ್ಲಿ ಮತ್ತೆ ವಾಹನಗಳ ಟೋಯಿಂಗ್ ಆರಂಭವಾಗಲಿದೆ.
ಹೌದು, ಬೆಂಗಳೂರಲ್ಲಿ ಮತ್ತೆ ಟೋಯಿಂಗ್ ಆರಂಭವಾಗಲಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಂಚಾರಿ ಪೊಲೀಸರಿಗೆ ಟೋಯಿಂಗ್ ವಾಹನ ನೀಡಲು ನಿರ್ಧರಿಸಿದೆ.
ಎಲ್ಲೆಂದರಲ್ಲಿ ವಾಹನಗಳ ನಿಲುಗಡೆಗೆ ಕಡಿವಾಣ ಹಾಕಲು ಜಿಬಿಎ ಸಿದ್ದತೆ ಮಾಡಿಕೊಂಡಿದ್ದು, ಪೊಲೀಸರಿಗೆ ನೀಡಲು 10 ವಾಹನ ಖರೀದಿಮಾಡಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗುವ ಅನಧಿಕೃತ ಪಾರ್ಕಿಂಗ್ಗಳನ್ನು ತಡೆಯಲು ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಆರಂಭಿಸಲಾಗುತ್ತಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ರಸ್ತೆಗಳಲ್ಲಿಯೇ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಸಂಚಾರದಟ್ಟಣೆ ಮತ್ತಷ್ಟು ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸುಗಮ ಸಂಚಾರಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬಹುತೇಕಕಡೆಗಳಲ್ಲಿ ಮುಖ್ಯರಸ್ತೆಗಳಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ಜನರ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ. ಇದನ್ನು ತಪ್ಪಿಸಲು ಟೋಯಿಂಗ್ ಕ್ರಮ ಮತ್ತೆ ಜಾರಿಯಾಗುತ್ತಿದೆ .
