ಬೆಂಗಳೂರು: ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನಪರಿಷತ್ ಸದಸ್ಯರಾಗಿ 45 ವರ್ಷ ಪೂರ್ಣಗೊಳಿಸಿದ್ದಾರೆ.
ಅವರು ರಾಜಕೀಯ ಪ್ರವೇಶಿಸಿ ಮೊದಲ ಬಾರಿಗೆ ವಿಧಾನ ಪರಿಷತ್ ಪ್ರವೇಶ ಮಾಡಿ ಜೂನ್ 30ಕ್ಕೆ 45 ವರ್ಷ ಪೂರ್ಣಗೊಂಡಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ತಮ್ಮ 31ನೇ ವರ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಹೊರಟ್ಟಿ ಅವರು ಮೊದಲ ಚುನಾವಣೆಯಲ್ಲಿ ಆಯ್ಕೆಯಾಗಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಸತತವಾಗಿ 8 ಬಾರಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಾಣ ಮಾಡಿ ದೇಶದಲ್ಲಿಯೇ ಹೊಸ ದಾಖಲೆ ನಿರ್ಮಿಸಿದ್ದಾರೆ.
ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸತತ 8 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು 39 ವರ್ಷ ಮಾತ್ರ ಶಾಸಕರಾಗಿದ್ದರು. ಬಸವರಾಜ ಹೊರಟ್ಟಿ ಅವರು 45 ವರ್ಷ ವಿಧಾನ ಪರಿಷತ್ ಸದಸ್ಯರಾಗಿದ್ದು, ಅವರ ವಿಧಾನ ಪರಿಷತ್ ಅವಧಿ ಇನ್ನೂ ಮೂರು ವರ್ಷ ಇದೆ. ನಿವೃತ್ತಿ ಸಂದರ್ಭದಲ್ಲಿ ಅವರು ಸತತ 48 ವರ್ಷ ವಿಧಾನ ಪರಿಷತ್ ಸದಸ್ಯರಾಗಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ.