ಹುಬ್ಬಳ್ಳಿ: ಒಂದೆಡೆ ಕೂಡಲ ಸಂಗಮ ಲಿಂಗಾಯಿತ ಪಂಚಾಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿ ನೇಮಕ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಮತ್ತೊಂದೆಡೆ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದು ಕೂಡ ಪ್ರಚಾರದ ಗಿಮಿಕ್ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಲಿಂಗಾಯಿತ ಪಂಚಮಸಾಲಿ ಸಮಾಜದ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿ ನೇಮಕ ಮಾಡಲು ನಿರ್ಧರಿಸಲಾಗಿದೆ. ಬಸವ ಜಯಮೃತ್ಯುಂಜಯ ಸ್ವಾಮಿಜಿ ವರ್ತನೆಯಿಂದ ಸಮಾಜದ ಜನರು ಬೇಸತ್ತಿದ್ದಾರೆ. ಅವರ ವರ್ತನೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಬಸವ ತತ್ವ ಪ್ರಚಾರ ಬಿಟ್ಟು ರಾಜಕೀಯ ಮಾಡುತ್ತಿದ್ದಾರೆ. ತಮ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಠವನ್ನೇ ಮನೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಊರಿಂದ ಊರಿಗೆ ಓಡಾಡುವುದು, ಮೊಬೈಲ್, ಫೇಸ್ ಬುಕ್ ಗಳಲ್ಲಿ ಮಾತನಾಡುವುದು, ರಾಜಕೀಯ ಪಕ್ಷಗಳ ಬ್ಯಾನರ್ ಅಡಿ ಕೂರುವುದು, ವರ್ಗಾವಣೆಗೆ ಶಿಫಾರಸು ಮಾಡುವುದು ಮಾಡುತ್ತಿದ್ದಾರೆ. ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಆದರೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೆಸರಲ್ಲಿ ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ತಲಾ ಒಂದೊಂದು ಮನೆ ಇದೆ. ಮಲಪ್ರಭಾ ದಂಡೆ ಮೇಲೆ ಮಠ ಕಟ್ಟುತ್ತೇನೆ. ಸಂಸ್ಥೆ ಕಟ್ಟಿ ಸಮಾಜದ ಬಡ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಮಾಡುತ್ತಿದ್ದೇನೆ ಎನ್ನುತ್ತಿದ್ದಾರೆ. ಟ್ರಸ್ಟ್ ಗೆ ನಾವೇ ವಾರಸ್ದಾರರು. ಪೀಠ ಮುನ್ನಡೆಸಿಕೊಂಡು ಹೋಗಲಷ್ಟೇ ಸ್ವಾಮೀಜಿ ನೇಮಕ ಮಾಡಿದ್ದು. ಆದರೆ ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಟ್ರಸ್ಟ್ ವಿರುದ್ಧ ನಡೆದುಕೊಂಡಿದ್ದಕ್ಕೆ ನೋಟಿಸ್ ಕೊಡಲಾಗಿತ್ತು. ಬಳಿಕ ತಪ್ಪು ತಿದ್ದಿಕೊಳ್ಳುವುದಾಗಿ ಹಿಂಬರಹದ ಪತ್ರ ಕೊಟ್ಟರು. ಆದಾರೂ ಮಠದಲ್ಲಿ ಸರಿಯಾಗಿ ಇರದೇ ಓಡಾಡುತ್ತಿದ್ದಾರೆ. ಒಂದೊಮೆ ಮಠದಲ್ಲಿ ಇದ್ದರೂ ಮಠವನ್ನು ಮನೆಯನ್ನಾಗಿ ಮಾಡಿಕೊಂಡಿದ್ದರು. ಭಕ್ತರಿಗೆ ಸ್ವಾಮೀಜಿ ದರ್ಶನವಾಗುತ್ತಿರಲಿಲ್ಲ. ಆಗಾಗ ಮಠಕ್ಕೆ ಕೆಲ ನರಿ, ನಾಯಿಗಳು ಬರುತ್ತಿದ್ದವು. ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದವು. ಟ್ರಸ್ಟ್ ಅಧ್ಯಕ್ಷನಾಗಿ ಮಠದ ರಕ್ಷಣೆಗಾಗಿ ಹಿರಿಯರೊಂದಿಗೆ ಚರ್ಚಿಸಿ ನಾನೇ ಗೇಟ್ ನಿರ್ಮಿಸಿ, ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದೆ. ಮಠಕ್ಕೆ ಬರುವುದಾಗಿ ಸ್ವಾಮೀಜಿ ನನ್ನನ್ನು ಸಂಪರ್ಕಿಸಿಲ್ಲ. ಅವರ ಪ್ರೇರಣೆ ಮೇರೆಗೆ ಕೆಲವರು ಮಧ್ಯರಾತ್ರಿ ಬಂದು ಮಠದ ಗೇಟ್ ಒಡೆದು ಅಕ್ರಮ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ಕೇಸ್ ದಾಖಲಾಗಿದೆ. ಮಠದ ರಕ್ಷಣೆಗೆ ಬೀಗ ಹಾಕಿದ್ದನ್ನೇ ಸ್ವಾಮೀಜಿ ತಪ್ಪು ತಿಳಿದು ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಕಿಡಿಕಾರಿದರು.
ಈಗ ಸ್ವಾಮೀಜಿ ಅನಾರೋಗ್ಯ ಎಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದಕ್ಕಿಂತ ಅದು ಸಹ ಪ್ರಚಾರದ ಗಿಮಿಕ್ ಇರಬಹುದು ಎಂದು ವ್ಯಂಗ್ಯವಾಡಿದರು.