ಹುಬ್ಬಳ್ಳಿ: ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅತ್ತ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರೆ, ಇತ್ತ ಹುಬ್ಬಳ್ಳಿಯಲ್ಲಿ ಟ್ರಸ್ಟ್ ಅಧ್ಯಕ್ಷ ಶಾಸಕ ವಿಜಯಾನಂದ ಕಾಶಪ್ಪನವರ್ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕೂಡಲಸಂಗಮ ಲಿಂಗಾಯಿತ ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಜಯನಾಂದ ಕಾಶಪ್ಪನವರ್, ಬಸವ ಜಯಮೃತ್ಯುಂಜಯ ಸ್ವಾಮೀಜಿ ವರ್ತನೆ, ನಡವಳಿಕೆಯಿಂದ ಸಮಾಜದ ಜನರು ಬೇಸತ್ತಿದ್ದಾರೆ. ಸಮಾಜದ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು ಸಭೆ ನಡೆಸಿ ಪರ್ಯಾಯ ಗುರುಗಳ ನೇಮಕದ ಬಗ್ಗೆ ಚರ್ಚಿನಡೆಸಿದ್ದಾರೆ. ಈಗಿರುವ ಸ್ವಾಮೀಜಿಯನ್ನು ಮಠ ಬಿಟ್ಟು ಹೋಗಿ ಎಂದು ನಾವು ಹೇಳುವುದಿಲ್ಲ. ಅವರಾಗಿಯೇ ಹೋದರೆ ಸಂತೋಷ ಎಂದು ಹೇಳಿದರು.
ಸಮಾಜದ ಅಭಿವೃದ್ಧಿಗಾಗಿ ಟ್ರಸ್ಟ್ ರಚಿಸಿ 2008ರಲ್ಲಿ ಬಸವ ಜಯಮೃತ್ಯುಂಜಯ ಸ್ವಾಮೀಜಿಯವರನ್ನು ಪೀಠಾಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಬಸವತತ್ವ ಪ್ರಚಾರ, ಸಮಾಜದ ಏಳಿಗೆಗೆ ಶ್ರಮಿಸಬೇಕಾಗಿದ್ದ ಸ್ವಾಮೀಜಿ ನಡವಳಿಕೆಯಲ್ಲಿ ಬಹಳ ಬದಲಾವಣೆಗಳಾಗಿವೆ. ಮೂಲ ಉದ್ದೇಶ ಮರೆತು ರಾಜಕೀಯ ಪಕ್ಷಗಳ ಬ್ಯಾನರ್ ಅಡಿ ಕುಳಿತುಕೊಳ್ಳುವುದು, ವರ್ಗಾವಣೆಗೆ ಶಿಫಾರಸು ಮಾಡುವುದು, ಯಾವುದೋ ಒಬ್ಬ ವ್ಯಕ್ತಿ ಪರ ಮಾತನಾಡುವುದು ಮಾಡುತ್ತಿದ್ದಾರೆ.
ಟ್ರಸ್ಟ್ ಬೈಲಾ ಪ್ರಕಾರ ಸ್ವಾಮೀಜಿ ಸ್ವಂತ ಆಸ್ತಿ ಹೊಂದುವಂತಿಲ್ಲ. ಆದರೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬೆಳಗಾವಿಯಲ್ಲಿ ಎರಡು ಮನೆ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ತಲಾ ಒಂದೊಂದು ಮನೆ ಹೊಂದಿದ್ದಾರೆ. ಟ್ರಸ್ಟ್ ಗೆ ನಾವೇ ವಾರಸ್ದಾರರು. ಪೀಠ ಮುನ್ನಡೆಸಿಕೊಂಡು ಹೋಗಲಷ್ಟೇ ಸ್ವಾಮೀಜಿ ನೇಮಕ ಮಾಡಿದ್ದು. ಆದರೆ ಸ್ವಾಮೀಜಿ ಟ್ರಸ್ಟ್ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬಸವತತ್ವ ಪ್ರಚಾರ ಮಾಡುವುದು ಬಿಟ್ಟು, ಊರೂರಲ್ಲಿ ಅಡ್ಡಾಡುತ್ತಾ, ಮೊಬೈಲ್ ನಲ್ಲಿ ಮಾತನಾಡುತ್ತಾ ಫೇಸ್ ಬುಕ್ ನಲ್ಲಿ ಲೈವ್ ಬರುತ್ತಿದ್ದಾರೆ. ಮಠದಲ್ಲಿ ಸರಿಯಾಗಿ ಇರದೇ ಸಂಚಾರದಲ್ಲಿ ನಿರತರಾಗಿದಾರೆ. ಭಕ್ತರಿಗೂ ಸ್ವಾಮೀಜಿಗಳು ಸಿಗುತ್ತಿಲ್ಲ. ಮಠಕ್ಕೆ ಯಾರ್ಯಾರೋ ನುಗ್ಗುತ್ತಿದ್ದಾರೆ. ಅನಿವಾರ್ಯವಾಗಿ ಮಠದ ರಕ್ಷಣೆಗೆ ಬೀಗ ಹಾಕಿದ್ದಕ್ಕೆ ಸ್ವಾಮೀಜಿ ತಪ್ಪು ತಿಳಿದುಕೊಂಡು ನಮ್ಮ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.