ಗುಜರಾತ್‌ನ ಕೇವಾಡಿಯಾ ಗ್ರಾಮದ ವರ್ತಕನನ್ನು ಅಪಹರಿಸಿದ 14 ಗಂಟೆಗಳ ಒಳಗೆ ಆತನನ್ನು ರಕ್ಷಿಸುವಲ್ಲಿ ಮಧ್ಯ ಪ್ರದೇಶದ ಬರ್ವಾನಿ ಹಾಗೂ ಜಾಬುವಾ ಪೊಲೀಸರು ಸಫಲರಾಗಿದ್ದಾರೆ.
ಮಧ್ಯ ಪ್ರದೇಶ – ಮಹಾರಾಷ್ಟ್ರದ ಗಡಿಯಲ್ಲಿರುವ ಖೇಟಿಯಾ ಗ್ರಾಮದಲ್ಲಿ ಈ ವರ್ತಕ ತನ್ನ ತಂಬಾಕು ಅಂಗಡಿ ಇಟ್ಟುಕೊಂಡಿದ್ದ. ಶುಕ್ರವಾದ ಮದ್ಯಾಹ್ನದ ವೇಳೆ ಈ ವ್ಯಕ್ತಿಯನ್ನು ಹಂತಕರು ಅಪಹರಿಸಿದ ಘಟನಾವಳಿ ಸಿಸಿ ಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ.
ಮಧ್ಯ ಪ್ರದೇಶದ ಉಜ್ಜೈನ್‌ನಲ್ಲಿ ನೋಂದಣಿಯಾದ ಮಾರುತಿ ಎರ್ಟಿಗಾ ಕಾರಿನಲ್ಲಿ ಅಪಹರಣಕಾರರು ಈ ಕೃತ್ಯ ನಡೆಸಿದ್ದಾರೆ. ಮಧ್ಯ ಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್‌ನ 500ರಷ್ಟು ವಿವಿಧ ಸ್ಥಳಗಳ ಸಿಸಿ ಟಿವಿ ಕ್ಯಾಮೆರಾ ತುಣುಕುಗಳನ್ನು ಪೊಲೀಸರು ಪರಿಶೀಲಿಸಿ ಹಂತಕರ ಜಾಡು ಹಿಡಿದಿದ್ದಾರೆ.
ಆರು ಮಂದಿ ಅಪಹರಣಕಾರರನ್ನು ಹಿಡಿದಿರುವ ಪೊಲೀಸರು ಇದೀಗ ಅವರಿಗೆ ಕುಮ್ಮಕ್ಕು ಕೊಟ್ಟ ಸಂಚುಕೋರರ ಪತ್ತೆಗೆ ಜಾಲ ಬೀಸಿದ್ದಾರೆ.
ಮದ್ಯಾಹ್ನದ ಅವಧಿಯಲ್ಲೇ ಅಂಗಡಿಗೆ ಆಗಮಿಸಿದ ಹಂತಕರು, ಮಾಲೀಕನನ್ನು ನೋಡ ನೋಡುತ್ತಲೇ ಕಾರಿಗೆ ತುಂಬಿಕೊಂಡು ಪರಾರಿಯಾಗಿದ್ದಾರೆ. ಸುತ್ತಲೂ ಇದ್ದ ಜನರಿಗೆ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಹಂತಕರು ಅಲ್ಲಿಂದ ಪರಾರಿಯಾಗಿದ್ದಾರೆ.
ತನ್ನ ಪತಿಯ ಅಪಹರಣದ ಸುದ್ದಿ ಕೇಳುತ್ತಲೇ ಹತ್ತಿರದ ಖೇಟಿಯಾ ಪೊಲೀಸ್ ಠಾಣೆಗೆ ದೌಡಾಯಿಸಿದ ವರ್ತಕನ ಪತ್ನಿ ಮನಿಷಾ ಪರಾಖ್ ದೂರು ನಿಡಿದ್ದಾರೆ. ಕೂಡಲೇ ಕ್ರಮಕ್ಕೆ ಮುಂದಾದ ಪೊಲೀಸರು 60 ಸಿಬ್ಬಂದಿಯ 10 ತಂಡಗಳನ್ನು ರಚಿಸಿ 14 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ.
ಗುಜರಾತ್ ಮೂಲದ ಮತ್ತೊಬ್ಬ ವ್ಯಾಪಾರಿ ಸೆಲಂಬಾ ಎಂಬಾತನೊಂದಿಗೆ ಹಣಕಾಸಿನ ವಿಚಾರವಾಗಿ ತನ್ನ ಪತಿಗೆ ವೈಮನಸ್ಯವಿತ್ತು ಎಂದು ಮನಿಷಾ ದೂರಿನಲ್ಲಿ ತಿಳಿಸಿದ್ದರು. ಆಕೆಯ ಹೇಳಿಕೆ ಮೇಲೆ ಆ ಪ್ರದೇಶದಲ್ಲಿದ್ದ ಕೆಲ ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು ಅವರಿಂದ ತಮಗೆ ಸಿಕ್ಕ ಮಾಹಿತಿ ಆಧರಿಸಿ ಒಂದಷ್ಟು ಜಾಗಗಳ ಮೇಲೆ ರೇಡ್ ಮಾಡಿದ್ದಾರೆ.
ಈ ವೇಳೆ ಅಪಹರಣಕಾರರ ಕಾರು ಗುಜರಾತ್‌ನ ಸೆಲಂಬಾ ಬಳಿ ಸಾಗುತ್ತಿರುವುದನ್ನು ಕಂಡುಕೊಂಡಿದ್ದಾರೆ. ತಾಂತ್ರಿಕ ಹಾಗೂ ಸರ್ವೇಕ್ಷಣಾ ತಂಡ ಕಾರಿನ ಮೇಲೆ ನಿಗಾ ಇಟ್ಟು, ಅಪಹರಣಕಾರರು ಗುಜರಾತಿನ ದಾಹೋದ್ ಜಿಲ್ಲೆಯ ಸ್ಥಳವೊಂದರಲ್ಲಿ ಇರುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ಮುಂದೆ ಕಾರಿನ ಜಾಡು ಹಿಡಿದ ಪೊಲೀಸರು, ಕಾರು ಮಧ್ಯ ಪ್ರದೇಶದ ಜಾಬುವಾ ಜಿಲ್ಲೆಯ ಪ್ರದೇಶವೊಂದರಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದು ಆ ಜಿಲ್ಲೆಯ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಕೂಡಲೇ ಕಾರನ್ನು ಬೆನ್ನಟ್ಟಿದ ಪೊಲೀಸರು, ಅಪಹರಣಕಾರರನ್ನು ಹಿಡಿದಿದ್ದಾರೆ. ಅಪಹರಿಸಿದ ಮನೋಜ್ ಪರಾಖ್‌ರನ್ನು ಅವರ ಊರಿನಲ್ಲಿ ಬಿಟ್ಟು ಬಂದಿರುವುದಾಗಿ ಪ್ರಾಥಮಿಕ ತನಿಖೆ ವೇಳೆ ಅಪಹರಣಕಾರರು ತಿಳಿಸಿದ್ದಾರೆ.
A few #goons abducted a tobacco trader from his shop in Khetia village situated on #MP–#Maharashtra border on Friday afternoon. #Barwani Police rescued him within 14 hours.#MadhyaPradeshNews pic.twitter.com/EkNPJZ0oAk
— Free Press Madhya Pradesh (@FreePressMP) June 17, 2023