ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಸರ್ಕಾರ ತೀರ್ಮಾನಿಸಿದರೆ, ಬಿಜೆಪಿ ಏಕೆ ಗಾಬರಿಯಾಗಬೇಕು? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ಮಾಡುವ ಸರ್ಕಾರದ ತೀರ್ಮಾನಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ, ಇದು ಕರ್ನಾಟಕ ಸರ್ಕಾರದ ತೀರ್ಮಾನ. ಇದರಿಂದ ಬಿಜೆಪಿಗೆ ಆತಂಕವೇಕೆ? ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಬಿಜೆಪಿ ಅವಧಿಯಲ್ಲಿ ಮಾಡಿರುವ ಕಾನೂನು ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಸಲು ನಾವು ತೀರ್ಮಾನಿಸಿದ್ದೇವೆ. ಈ ತೀರ್ಮಾನದಿಂದ ನಿಮಗೆ ಗಾಬರಿ ಯಾಕೆ? ಕಳ್ಳನ ಮನಸ್ಸು ಹುಳ್ಳಗೆ ಎಂಬಂತೆ ಯಾಕೆ ವರ್ತಿಸುತ್ತಿದ್ದೀರಿ. ನಾವು ಲೋಕಸಭೆ ಚುನಾವಣೆಗಳನ್ನು ಪರಿಶೀಲನೆ ಮಾಡಿದ್ದೇವೆ. ಸಹಕಾರಿ ಸಂಘಗಳಿಗೆ ಚುನಾವಣೆ ನಡೆಸುವಂತೆ ಸ್ಥಳೀಯ ಸಂಸ್ಥೆ ಚುನಾವಣೆ ಮಾಡುತ್ತಿದ್ದೇವೆ. ಕೇಂದ್ರ ಚುನಾವಣಾ ಆಯೋಗ ಅವರ ತೀರ್ಮಾನದಂತೆ ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳ ಚುನಾವಣೆ ನಡೆಸಲಿದೆ ಎಂದು ತಿಳಿಸಿದರು.