ಬಳ್ಳಾರಿ: ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಬಳ್ಳಾರಿ ಜಿನ್ಸ್ ಉದ್ಯಮದ 36 ಘಟಕಗಳಿಗೆ ಬೀಗ ಹಾಕಲಾಗಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಜೀನ್ಸ್ ವಾಷಿಂಗ್ ಘಟಕಗಳಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂಬ ವರದಿ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ಜಾರಿ ಮಾಡಿತ್ತು. ನೀರು ಶುದ್ಧೀಕರಿಸದೇ ಯಥಾವತ್ತಾಗಿ ರಾಸಾಯನಿಕ ಮಿಶ್ರಣದ ನೀರನ್ನು ಹರಿ ಬಿಡಲಾಗುತ್ತಿತ್ತು. ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿರುವ ಬಗ್ಗೆ ಹಲವು ಬಾರಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿತ್ತು. ಆದಾಗ್ಯೂ ಸರಿಪಡಿಸಿಕೊಳ್ಳದ ಕಾರಣ ಬಳ್ಳಾರಿ ಜೀನ್ಸ್ ನ 36 ಘಟಕಗಳಿಗೆ ಬೀಗ ಹಾಕಲು ನೋಟಿಸ್ ನೀಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಜೆಸ್ಕಾಂ ಗೂ ಸೂಚನೆ ನೀಡಲಾಗಿದೆ.
ಬಳ್ಳಾರಿ ಜೀನ್ಸ್ ಉದ್ಯಮವನ್ನೇ ನಂಬಿ ಜೀವನ ಸಾಗಿಸುತ್ತಿದ್ದ 2 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಜೀನ್ಸ್ ಘಟಕಗಳು ಬಂದ್ ಆಗಿದ್ದು ಬಿಕೋ ಎನ್ನುತ್ತಿವೆ. ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಪ್ರಸಿದ್ಧ ಉದ್ದಿಮೆಯ ಘಟಕವೇ ಬಾಗಿಲು ಮುಚ್ಚುವಂತಾಗಿದೆ. ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಇಷ್ಟಾದರೂ ಜಿಲ್ಲಾಡಳಿತ ಹಾಗೂ ಜೀನ್ಸ್ ಉದ್ದಿಮೆದಾರರು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ.
