ಬಿತ್ತನೆ ಬೀಜ ದರ ಹೆಚ್ಚಳ ಆತಂಕದಲ್ಲಿರುವ ರೈತರಿಗೆ ಸಿಎಂ ಮುಖ್ಯ ಮಾಹಿತಿ

ಬೆಂಗಳೂರು:  2023-24ನೇ ಸಾಲಿನ ಭೀಕರ ಬರಗಾಲದಿಂದಾಗಿ ರಾಜ್ಯದಲ್ಲಿ ಬೀಜೋತ್ಪಾದನೆ ಗಣನೀಯವಾಗಿ ಕುಂಠಿತವಾಗಿದ್ದು, ಬೀಜೋತ್ಪಾದಕರಿಂದ ಖರೀದಿಸುವ ಬಿತ್ತನೆ ಬೀಜದ ದರಗಳು ಸಹ ಗಣನೀಯವಾಗಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿತ್ತನೆ ಬೀಜದ ಮಾರಾಟದ ದರ ಏರಿಕೆಯಾಗಿದೆ. ಈ ದರ ಏರಿಕೆ ಮುಂಗಾರು ಬೆಳೆ ಬೆಳೆಯುವ ಎಲ್ಲ ರಾಜ್ಯಗಳಲ್ಲಿಯೂ ಆಗಿದ್ದು ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಬೀಜಗಳ ದರ ಕಡಿಮೆ ಇದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಬಿತ್ತನೆ ಬೀಜಗಳ ಮಾರಾಟ ದರಗಳನ್ನು ನಿಗದಿಪಡಿಸುವ ಸಂದರ್ಭಗಳಲ್ಲಿ ಬಿತ್ತನೆ ಬೀಜ ಖರೀದಿ ದರಗಳು ಹಾಗೂ ಗರಿಷ್ಠ APMC ಮಾರಾಟ ದರಗಳನ್ನು ಆಧಾರವಾಗಿ ಪರಿಗಣಿಸಲಾಗುತ್ತದೆ. 2022-23ನೇ ಸಾಲಿಗೆ ಹೋಲಿಸಿದಾಗ 2023-24ನೇ ಸಾಲಿನಲ್ಲಿ ವಿವಿಧ ಬೆಳೆಗಳ ಖರೀದಿ ದರಗಳಲ್ಲಿ (Procurement Rates) ಗರಿಷ್ಠ ಶೇ.59.58ರಷ್ಟು ವ್ಯತ್ಯಾಸವಾಗಿರುತ್ತದೆ ಎಂದು ತಿಳಿಸಿದ್ದಾರೆ.

ರೈತರು ತಮ್ಮ ಜಮೀನಿನಲ್ಲಿಯೇ ಬೀಜಗಳನ್ನು ಉತ್ಪಾದನೆ ಮಾಡುತ್ತಾರೆ. ಇದನ್ನು ಕರ್ನಾಟಕ ರಾಜ್ಯ ಬೀಜ ನಿಗಮ ನಿ., ರಾಷ್ಟ್ರೀಯ ರಾಜ್ಯ ಬೀಜ ನಿ., ಕರ್ನಾಟಕ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ಹಾಗೂ ಖಾಸಗಿ ಸಂಸ್ಥೆಗಳು ಕೈಗೊಂಡು ಸರಬರಾಜು ಮಾಡುತ್ತವೆ ಎಂದು ಮಾಹಿತಿ ನೀಡಿದ್ದಾರೆ.

ಈ ಬಾರಿ ಹೆಸರು ಬೆಳೆಯ ಬಿತ್ತನೆ ಬೀಜಗಳ ಎಲ್‌-1 ದರವು ಶೇ.48.5, ಉದ್ದು ಬೆಳೆಯ ದರವು ಶೇ.37.72, ತೊಗರಿ ಬೆಳೆಯ ವಿವಿಧ ತಳಿಗಳ ಬಿತ್ತನೆ ಬೀಜಗಳ ದರದಲ್ಲಿ ಶೇ.28.29 ರಿಂದ 37.69ರಷ್ಟು ಮತ್ತು ಜೋಳದ ಬೆಳೆಯ ಎಲ್‌-1 ದರವು ಶೇ.7.66 ರಿಂದ ಶೇ.33.33ರಷ್ಟು ಹೆಚ್ಚಾಗಿರುತ್ತದೆ. ಬೀಜಗಳ ಖರೀದಿ ದರದಲ್ಲಿನ ಹೆಚ್ಚಳದ ಮೊತ್ತವು ಬೀಜೋತ್ಪಾದನೆಯಲ್ಲಿ ತೊಡಗಿರುವ ರೈತರಿಗೆ ವರ್ಗಾವಣೆಯಾಗಿರುತ್ತದೆ ಎನ್ನುವುದು ಗಮನಾರ್ಹ ಅಂಶವಾಗಿದೆ ಎಂದು ವಿವರಿಸಿದ್ದಾರೆ.

ಇದಲ್ಲದೆ ಕೆಲ ಬಿತ್ತನೆ ಬೀಜದ ದರದಲ್ಲಿ ಇಳಿಕೆ ಹಾಗೂ ಯಥಾಸ್ಥಿತಿ ಕೂಡ ಕಂಡುಬಂದಿದೆ. 2024ರ ಮುಂಗಾರು ಹಂಗಾಮಿನ ಸೋಯಾಅವರೆ ಬಿತ್ತನೆ ಬೀಜದ ದರವು 2023ರ ಮುಂಗಾರು ಹಂಗಾಮಿನ ಎಲ್‌-1 ದರಗಳ ಹೋಲಿಕೆಯಲ್ಲಿ ಶೇ.8ರಷ್ಟು ಕಡಿತಗೊಂಡಿರುತ್ತದೆ. ಸೂರ್ಯಕಾಂತಿ ಬಿತ್ತನೆ ಬೀಜದ ದರ ಕಳೆದ ಸಾಲಿನಷ್ಟೇ ಇದ್ದು ಯಾವುದೇ ಬದಲಾವಣೆ ಇರುವುದಿಲ್ಲ.

ಬಿ.ಟಿ. ಹತ್ತಿ ಬಿತ್ತನೆ ಬೀಜಗಳನ್ನು ರಾಜ್ಯ ಸರ್ಕಾರದ ಇಲಾಖಾ ವತಿಯಿಂದ ರಿಯಾಯತಿ ದರದಲ್ಲಿ ವಿತರಣೆ ಮಾಡುತ್ತಿರುವುದಿಲ್ಲ. ಬಿ.ಟಿ. ಹತ್ತಿ ಬಿತ್ತನೆ ಬೀಜಗಳ ಗರಿಷ್ಠ ದರಗಳನ್ನು ಕೇಂದ್ರ ಸರ್ಕಾರದ ವತಿಯಿಂದಲೇ ನಿಗದಿಪಡಿಸಲಾಗುತ್ತದೆ.

ರಾಜ್ಯದಲ್ಲಿನ ವಿವಿಧ ಬೆಳೆಗಳ ಬಿತ್ತನೆ ಬೀಜಗಳಲ್ಲಿನ ದರ ವ್ಯತ್ಯಾಸವು 2023ರ ಹೋಲಿಕೆಯಲ್ಲಿ ಈ ಬಾರಿ ಗರಿಷ್ಠ ಶೇ.48.50ರಷ್ಟಿದೆ. ಆದಾಗ್ಯೂ, ನೆರೆಯ ರಾಜ್ಯಗಳಲ್ಲಿನ ಪ್ರಸಕ್ತ ಸಾಲಿನ ಬಿತ್ತನೆ ಬೀಜಗಳ ದರಗಳ ಏರಿಕೆಯ ಹೋಲಿಕೆಯಲ್ಲಿ ರಾಜ್ಯದಲ್ಲಿನ ಬಿತ್ತನೆ ಬೀಜಗಳ ದರದ ಏರಿಕೆಯು ಕಡಿಮೆಯಾಗಿರುತ್ತದೆ.

ಉದಾಹರಣೆಗೆ ಮಹಾರಾಷ್ಟ್ರದಲ್ಲಿ ಸೋಯಾಅವರೆ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಎಲ್‌-1 ದರವು ರೂ.8500/- ನಿಗದಿಯಾಗಿದ್ದು ಕರ್ನಾಟಕದಲ್ಲಿ ಇದು 7270 ರೂ. ನಿಗದಿಯಾಗಿದೆ. ಅದೇ ರೀತಿ, ತೊಗರಿ ಬೆಳೆಗೆ ಮಹಾರಾಷ್ಟ್ರದಲ್ಲಿ ಪ್ರತಿ ಕ್ವಿಂಟಾಲ್‌ಗೆ 25,000 ರೂ. ಇದ್ದು ಕರ್ನಾಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ 17,900 ರೂ. ನಿಗದಿಪಡಿಸಲಾಗಿದೆ. ಹೆಸರು ಮತ್ತು ಜೋಳದ ಬೆಳೆಗೆ ಪ್ರತಿ ಕ್ವಿಂಟಾಲ್‌ಗೆ ಮಹಾರಾಷ್ಟ್ರದಲ್ಲಿ ಕ್ರಮವಾಗಿ 23,500 ರೂ., 14,000 ರೂ. ಇದ್ದು ಕರ್ನಾಟಕದಲ್ಲಿ ಕ್ರಮವಾಗಿ 18,600 ರೂ., 12,500 ರೂ. ನಿಗದಿಪಡಿಸಲಾಗಿದೆ. ಈ ಹೋಲಿಕೆಯಲ್ಲಿ ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜಗಳ ದರಗಳು ಗಣನೀಯವಾಗಿ ಕಡಿಮೆ ಇರುವುದು ಕಂಡುಬರುತ್ತದೆ.

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿ ಆಗುತ್ತಿದ್ದು ಕೃಷಿ ಚಟುವಟಿಕೆಗಳು ಗರಿಗೆದರಿವೆ. ಇದೇ ವೇಳೆ, ಬಿತ್ತನೆ ಬೀಜಗಳ ದರಗಳು ಏರಿಕೆಯಾಗಿರುವ ಬಗ್ಗೆ ವಿವಿಧ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದು ಈ ಕುರಿತು ಕೃಷಿ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ವಾಸ್ತವ ಸ್ಥಿತಿಯನ್ನು ವಿವರಿಸಿದೆ ಎಂದು ಸಿಎಂ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

https://twitter.com/siddaramaiah/status/1795454433779761292

https://twitter.com/siddaramaiah/status/1795454717654368369

https://twitter.com/siddaramaiah/status/1795454812168847505

https://twitter.com/siddaramaiah/status/1795455020105638165

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read