ಬ್ಯೂಟಿ ಪಾರ್ಲರ್ ತೆರೆಯಲು ಪತಿಯಿಂದ 2 ಲಕ್ಷ‌ ರೂ. ಪಡೆದ ಪತ್ನಿ; ಅದೇ ಹಣದಲ್ಲಿ ಗಂಡನ ಕೊಲೆಗೆ ಸುಪಾರಿ

ಬ್ಯೂಟಿ ಪಾರ್ಲರ್ ತೆರೆಯಲು ಗಂಡನಿಂದ ಹಣ ಪಡೆದು ಅದೇ ಹಣದಿಂದ ಗಂಡನ ಕೊಲೆಗೆ ಸುಪಾರಿ ಕೊಟ್ಟ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ನಲ್ಲಿ ನಡೆದಿದೆ. ಗಂಡನ ಕೊಲೆಯಾದ 24 ಗಂಟೆಯೊಳಗೇ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.

ಕೂಲಿ ಕಾರ್ಮಿಕ ಗಣೇಶ್ ದಾರಾಖೆಯ ಶವ ಪ್ರಮೋದ್ ಮಹಾಜನ್ ಕ್ರೀಡಾ ಸಂಕುಲದ ಬಳಿ ಸಿಕ್ಕಿತ್ತು. ಇದರ ಜಾಡು ಹಿಡಿದ ಪೊಲೀಸರು ಆತನ ಪತ್ನಿ, ಪ್ರಿಯಕರ ಸೇರಿದಂತೆ ಐವರು ಶಂಕಿತರನ್ನು ಬಂಧಿಸಿದ್ದಾರೆ. ಮೃತನ ಪತ್ನಿ ತನ್ನ ಅಕ್ರಮ ಸಂಬಂಧ ಹಾಗೂ ಹಣದ ದುರಾಸೆಯಿಂದ 2 ಲಕ್ಷ ರೂ.ಗೆ ಸುಪಾರಿ ನೀಡಿದ್ದಳು.

ಗಣೇಶ್ ದಾರಾಖೆ ಮತ್ತು ಅವರ ಪತ್ನಿ ರೂಪಾಲಿ ಸಣ್ಣಪುಟ್ಟ ಕಾರಣಗಳಿಗಾಗಿ ಆಗಾಗ್ಗೆ ಜಗಳವಾಡುತ್ತಿದ್ದರು. ದಾರಾಖೆ ಮದ್ಯ ವ್ಯಸನಿಯಾಗಿದ್ದು ರೂಪಾಲಿ ಜತೆ ಆಗಾಗ ಜಗಳವಾಡುತ್ತಿದ್ದ. ಹೀಗಾಗಿ ಕಳೆದ ನಾಲ್ಕು ವರ್ಷಗಳಿಂದ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದಳು. ಈ ವೇಳೆ ಆಕೆ ಸುಪದು ಗಾಯಕ್ವಾಡ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದಳು. ಸಂಬಂಧಿಕರು ಮತ್ತು ಕುಟುಂಬಸ್ಥರು ಮಧ್ಯಪ್ರವೇಶಿಸಿ ಆಕೆಯನ್ನು ಮನವೊಲಿಸಿದಾಗ, ಕಳೆದ ಎರಡು ತಿಂಗಳಿಂದ ಮತ್ತೆ ಪತಿಯೊಂದಿಗೆ ವಾಸಿಸಲು ಪ್ರಾರಂಭಿಸಿದಳು.

ದಾರಖೆ ಚಿಕಲಠಾಣಾದಲ್ಲಿರುವ ತಮ್ಮ ಮನೆಯನ್ನು 20 ಲಕ್ಷ ರೂ.ಗೆ ಮಾರಿದ್ದರು. ಗಂಡನೊಂದಿಗೆ ವಾಸಿಸ್ತಿದ್ದ ರೂಪಾಲಿಗೆ ತನ್ನ ಗೆಳೆಯ ಗಾಯಕ್ವಾಡ್ ಭೇಟಿಗೆ ಅಡ್ಡಿಯಾಗುತ್ತಿತ್ತು ಈ ವೇಳೆ ದಾರಖೆ ತಮ್ಮ ಮನೆ ಮಾರಿದ್ದ ಹಣದ ಮೊದಲ ಕಂತಾಗಿ 8 ಲಕ್ಷ ರೂ. ಪಡೆದಿದ್ದು, ಬ್ಯೂಟಿ ಪಾರ್ಲರ್ ಆರಂಭಿಸಲು ರೂಪಾಲಿಗೆ 2 ಲಕ್ಷ ರೂ.ನೀಡಿದ್ದರು. ಆದರೆ ಬ್ಯೂಟಿ ಪಾರ್ಲರ್ ಗೆಂದು ಹಣ ಪಡೆದ ಪತ್ನಿ ಅದನ್ನು ತನ್ನ ಗೆಳೆಯ ಗಾಯಕ್ವಾಡ್ ಗೆ ನೀಡಿ ಗಂಡನ ಹತ್ಯೆಗೆ ಸಂಚು ರೂಪಿಸಿದ್ದಳು.

ದಾರಾಖೆ ಎಸ್‌ಬಿಒಎ ಶಾಲೆಯ ಬಳಿ ಕೆಲಸಕ್ಕೆ ಹೋಗುತ್ತಿದ್ದಾಗ ಗಾಯಕ್ವಾಡ್ ಮತ್ತು ಅವರ ಮೂವರು ಸಹಚರರು ಅವರನ್ನು ತಡೆದು ಕತ್ತು ಸೀಳಿದ್ದಾರೆ. ದಾರಾಖೆ ಪ್ರಮೋದ್ ಮಹಾಜನ್ ಕ್ರೀಡಾ ಸಂಕುಲದಲ್ಲಿ ಜಾಗಿಂಗ್ ಟ್ರ್ಯಾಕ್‌ಗೆ ಓಡಿ ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಟ್ರ್ಯಾಕ್ ಮೇಲೆ ಕುಸಿದು ಸಾವನ್ನಪ್ಪಿದರು.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದರು. ಕೊಲೆ ಪ್ರಕರಣದಲ್ಲಿ ನಾಲ್ವರು ಹಂತಕರು ಭಾಗಿಯಾಗಿರುವುದನ್ನು ಕಂಡುಕೊಂಡ ಪೊಲೀಸರು ಕೊಲೆಯಲ್ಲಿ ರೂಪಾಲಿ ಕೈವಾಡವನ್ನು ಪತ್ತೆಹಚ್ಚಿದರು.

ವಿಚಾರಣೆ ವೇಳೆ ಪತಿಯನ್ನು ಕೊಲ್ಲುವಂತೆ ಗಾಯಕ್ವಾಡ್ ಗೆ ಸುಪಾರಿ ನೀಡಿದ ಬಗ್ಗೆ ರೂಪಾಲಿ ತಪ್ಪೊಪ್ಪಿಕೊಂಡಿದ್ದಾಳೆ. ಅದರಂತೆ ರೂಪಾಲಿ , ಸುಪದು ಗಾಯಕ್ವಾಡ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read