ಬೆಳ್ತಂಗಡಿ: ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಹೊಸ ನಿಯಮ ಜಾರಿಗೊಳಿಸಲಾಗಿದೆ. ಕೊಟ್ಟಿಗೆಹಾರ ಚೆಕ್ಪೋಸ್ಟ್ ಮೂಲಕ ದಾಟುವ ಎಲ್ಲಾ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ 5 ವಾಹನಗಳು ಒಟ್ಟಿಗೆ ಹೊರಡುವಂತೆ ವ್ಯವಸ್ಥೆ ರೂಪಿಸಲಾಗಿದೆ.
ದಟ್ಟ ಅರಣ್ಯದಿಂದ ಸುತ್ತುವರೆದ ಚಾರ್ಮಾಡಿ ಘಾಟಿಯಲ್ಲಿ ರಾತ್ರಿಯ ವೇಳೆ ಗೋ ಕಳ್ಳತನ ಮತ್ತು ಅಪರಾಧ ಚಟುವಟಿಕೆಗಳು ನಡೆಯುತ್ತಿರುವ ದೂರುಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದನ್ನು ತಡೆಯುವ ಉದ್ದೇಶದಿಂದ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಕೊಟ್ಟಿಗೆಹಾರ ಚೆಕ್ಪೋಸ್ಟ್ ನಲ್ಲಿ ರಾತ್ರಿ ವೇಳೆ ಒಬ್ಬ ಪಿಎಸ್ಐ ನೇತೃತ್ವದಲ್ಲಿ ಪೊಲೀಸರು ಕಾವಲಿರುತ್ತಾರೆ. ಜೊತೆಗೆ ಚೆಕ್ ಪೋಸ್ಟ್ ನಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕಚ್ಚಾ ರಸ್ತೆಯಲ್ಲಿ ಗೇಟ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಗೇಟ್ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆಯವರೆಗೆ ಮುಚ್ಚಿರುತ್ತದೆ.
ಘಾಟಿಯಲ್ಲಿ ವಿಪರೀತ ಮಂಜಿನ ವಾತಾವರಣ, ಕಾಡುಪ್ರಾಣಿಗಳ ತಿರುಗಾಟ, ಮರಗಳು ಬಿದ್ದು ಸಂಚಾರದಲ್ಲಿ ವ್ಯತ್ಯಯ, ಮೊದಲಾದ ಸಮಸ್ಯೆಗಳಿಗೆ ಇದರಿಂದ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.