ALERT : ಸಾರ್ವಜನಿಕರೇ ಎಚ್ಚರ : ಬೇಸಿಗೆ ಬಂತು…ಆರೋಗ್ಯದ ಬಗ್ಗೆ ಇರಲಿ ಈ ಕಾಳಜಿ..!

ಬೇಸಿಗೆಯಲ್ಲಿ ಬಿಸಲಿನ ತಾಪವು ಹೆಚ್ಚಾಗಿರುವುದರಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮ ಹಾಗೂ ಅವುಗಳ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕಕು ಹೆಚ್ಚಿನ ಕಾಳಜಿ ವಹಿಸಬೇಕು.

ಈ ಬಗ್ಗೆ ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು
ಪ್ರಕಟಣೆ ಹೊರಡಿಸಿದ್ದು, ಸಾರ್ವಜನಿಕರು ಬಿಸಿಲಿನ ತಾಪಮಾನದಿಂದ ಹೇಗೆ ರಕ್ಷಿಸಿಕೊಳ್ಳಬೇಕು ಮತ್ತು ಬಿಸಿಲಿನ ಬೇಗೆಯಿಂದ ಮನುಷ್ಯ ಶಾಖಾಘಾತಕ್ಕೊಳಗಾದಾಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈ ಕೆಳಕಂಡಂತೆ ತಿಳಿಸಿದ್ದಾರೆ.

*ಏನು ಮಾಡಬೇಕು..?

ಸಡಿಲವಾದ, ತೆಳು ಬಣ್ಣದ ಹತ್ತಿಯ ಬಟ್ಟೆ ಧರಿಸಬೇಕು. ಕೈಗೆಟುಕುವಂತೆ ಕುಡಿಯುವ ನೀರನ್ನು ಇಟ್ಟುಕೊಳ್ಳಿ. ಆಗಾಗ್ಗೆ ನಿಧಾನವಾಗಿ ಧಾರಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ. ಹಣ್ಣಿನ ರಸ, ಪಾನಕಗಳನ್ನು ಕುಡಿಯಿರಿ. ಹತ್ತಿಯ ನುಣುಪಾದ ಬಟ್ಟೆ, ಟಿಶ್ಯೂ ಕರವಸ್ತ್ರದಿಂದ ಬೆವರನ್ನು ಒರೆಸಿರಿ. ನೀರು, ಮಜ್ಜಿಗೆ, ಎಳೆನೀರು ಕುಡಿಯಬಹುದು. ಬೆಚ್ಚಗಿನ, ಮಸಾಲೆ ರಹಿತ, ಶುದ್ದ ಸಾತ್ವಿಕ ಆಹಾರ ಸೇವಿಸಬೇಕು. ಗಾಳಿಯಾಡುವಂತಹ ಪಾದರಕ್ಷೆ ಧರಿಸಿರಿ. ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ದ ಕುಡಿಯುವ ನೀರನ್ನು ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.

ಚರ್ಮ ಕೆಂಪಾದರೆ, ಬೆವರು ಕಡಿಮೆಯಾದರೆ, ದೇಹದ ಉಷ್ಣತೆ ಜಾಸ್ತಿಯಾದರೆ, ದೀರ್ಘವಾದ ತೀರ್ವ ಉಸಿರಾಟವಿದ್ದಲ್ಲಿ ತುರ್ತಾಗಿ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವೇ 104ಕ್ಕೆ ಕರೆ ಮಾಡಬೇಕು. ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸಿದ ನೀರು ಅಥವಾ ನೀರು ಶುದ್ದೀಕರಣ ಘಟಕದ ನೀರನ್ನು ಕುಡಿಯಲು ಬಳಸಿ ಎಂದು ಅವರು ತಿಳಿಸಿದ್ದಾರೆ.

ಕೈಗಳನ್ನು ಸಾಬೂನು ಮತ್ತು ನೀರಿನಿಂದ 45 ಸೆಕೆಂಡ್ಗಳ ಕಾಲ ತೊಳೆದ ನಂತರ ಆಹಾರ ಸೇವಿಸಬೇಕು. ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಮಲ, ಮೂತ್ರ ವಿಸರ್ಜನೆಗಾಗಿ ಶೌಚಾಲಯ ಬಳಸಬೇಕು. ಸುರಕ್ಷಿತ ಆಹಾರ ಮಾತ್ರ ಸೇವಿಸಿ, ಆದಷ್ಟು ಮನೆಯಲ್ಲಿ ತಯಾರಿಸಿದ ಆಹಾರಕ್ಕೆ ಆದ್ಯತೆ ನೀಡಿರಿ ಎಂದು ಅವರು ಮನವಿ ಮಾಡಿದ್ದಾರೆ.

*ಏನು ಮಾಡಬಾರದು

ಬಿಗಿಯಾದ, ಗಾಢ ಬಣ್ಣದ, ಸಿಂಥೆಟಿಕ್ ಬಟ್ಟೆ ಧರಿಸಬಾರದು. ಕುಷನ್ಯುಕ್ತ ಕುರ್ಚಿಯಲ್ಲಿ ಕೂಡಬಾರದು. ಸೋಡಾ ಇತ್ಯಾದಿ ಕಾರ್ಬೋನೇಟೆಡ್ ತಂಪು ಪಾನಿಯಗಳನ್ನು ಕುಡಿಯಬೇಡಿ (ಬಾಯಾರಿಕೆಯಾದಾಗ ಕಡ್ಡಾಯವಾಗಿ ನೀರು ಕುಡಿಯಬೇಕು). ಬೆವರನ್ನು ಒರೆಸಲು ಒರಟಾದ ಬಟ್ಟೆಯನ್ನು ಉಪಯೋಗಿಸಬೇಡಿ. ಕಾಫಿ, ಟೀ, ಅತಿ ಸಕ್ಕರೆ ಅಂಶವುಳ್ಳ ಪಾನೀಯ ಅತಿಯಾಗಿ ಸೇವಿಸಬಾರದು. ಬಿಸಿಯಾದ ಮಸಾಲೆಯುಕ್ತ ಆಹಾರ ತಿನ್ನಬಾರದು. ಮಾಂಸಹಾರ ಸೇವನೆ ಮತ್ತು ಮಧ್ಯಪಾನ ವರ್ಜಿಸಿಬೇಕು.

ಬಿಗಿಯಾದ ಗಾಳಿಯಾಡದ ಪಾದರಕ್ಷೆ ಅಥವಾ ಶೂ ಧರಿಸಬೇಡಿ. ಉಷ್ಣತೆಯಿಂದ ಸುಸ್ತಾದಾಗ ತುಂಬಾ ತಣ್ಣಗಿನ ಅಥವಾ ಶೀತಲೀಕರಿಸಿದ ನೀರಿನಿಂದ ಒರೆಸಿಕೊಳ್ಳಬೇಡಿ (ಇದರಿಂದ ದೇಹದ ಹೊರಪದರದಲ್ಲಿನ ರಕ್ತನಾಳಗಳು ಸಂಕುಚಿತಗೊಂಡು ದೇಹದ ಒಳಗಿನ ಉಷ್ಣತೆ ದೇಹದೊಳಗೆ ಬಂಧಿತವಾಗಿ ಅಂಗಾಂಗಗಳು ನಿಷ್ಕ್ರಿಯಗೊಂಡು ಹೆಚ್ಚಿನ ಹಾನಿಯಾಗುವ ಸಂಭವವಿರುತ್ತದೆ

ಬೇಸಿಗೆಯಲ್ಲಿ ಕಲುಷಿತ ನೀರಿನ ಸೇವನೆಯಿಂದ ಸಂಭಾವ್ಯ ವಾಂತಿ-ಬೇಧಿ ಪ್ರಕರಣಗಳು ಉಂಟಾಗುವ ಹಿನ್ನಲೆಯಲ್ಲಿ ಶುದ್ಧೀಕರಿಸದೇ ಇರುವ ನೀರನ್ನು ಮತ್ತು ಕೆರೆ, ಕುಂಟೆಗಳ ನೀರನ್ನು ನೇರವಾಗಿ ಕುಡಿಯಬಾರದು. ಕೈಗಳನ್ನು ತೊಳೆದುಕೊಳ್ಳದೇ ಆಹಾರವನ್ನು ಸೇವಿಸಬೇಡಿ, ನೀರಿನ ಸಂಗ್ರಹಣಗಳ ಮೇಲೆ ತಪ್ಪದೇ ಮುಚ್ಚಳ ಮುಚ್ಚಬೇಕು. ಬಯಲು ಪ್ರದೇಶಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡಬಾರದು. ರಸ್ತೆ ಬದಿ ತೆರೆದಿಟ್ಟ ಆಹಾರ ಪದಾರ್ಥ ಮತ್ತು ಕತ್ತಿರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು. ತಯಾರಿಸಿದ ಆಹಾರವನ್ನು ಮುಚ್ಚಳದಿಂದ ಮುಚ್ಚಬೇಕು ಎಂದು ಹೇಳಿದ್ದಾರೆ.

*ಶಾಖಾಘಾತದ ಲಕ್ಷಣಗಳು

ಅತಿಹೆಚ್ಚು ಬಿಸಿಲಿನ ತಾಪಮಾನದಿಂದ ಮನುಷ್ಯನು ಶಾಖಾಘಾತಕ್ಕೆ ಒಳಗಾಗುವ ಸಂಭವವಿರುತ್ತದೆ. ಅದರಲ್ಲಿ ಮುಖ್ಯವಾಗಿ ಸಂಭ್ರಾಂತಿ, ಅಸಂಗತ ಮಾತು, ವ್ಯತ್ಯಸ್ಥ ಪ್ರಜ್ಞೆ ಶಾಖಾಘಾತದ ಲಕ್ಷಣಗಳಾಗಿವೆ.

*ಶಾಖಾಘಾತಕ್ಕೆ ಚಿಕಿತ್ಸೆ

ಮನುಷ್ಯನು ಬಿಸಿಲಿನ ಬೇಗೆಯಿಂದ ಶಾಖಾಘಾತಕ್ಕೊಳಗದಾಗ ನೆರಳಿರುವೆಡೆಗೆ ಸ್ಥಳಾಂತರಿಸಬೇಕು. ವ್ಯಕ್ತಿಯ ವಸ್ತ್ರಗಳನ್ನು ಸಡಿಲಗೊಳಿಸಿ, ಅಂಗಾತ ಮಲಗಿಸಿ, ಕಾಲುಗಳನ್ನು ಎತ್ತರಿಸಿ, ಸಾಮಾನ್ಯ ನೀರಿನಿಂದ ದೇಹವನ್ನು ಒರೆಸಬೇಕು. ಇಲ್ಲವೇ ಹತ್ತಿರದ ವೈದ್ಯರನ್ನು ಕರೆಸಬೇಕು.

ಎಲ್ಲಾ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೇಸಿಗೆಯಲ್ಲಿ ಬರಬಹುದಾದ ರೋಗಗಳ ಆರೈಕೆಗಾಗಿ ಓಆರ್ಎಸ್, ಐವಿ ಪ್ಲೂಯಿಡ್ಸ್ ಮತ್ತು ಜೀವರಕ್ಷಕ ಔಷಧಗಳ ದಾಸ್ತಾನು ಇಟ್ಟುಕೊಳ್ಳುವಂತೆ ಹಾಗೂ ಆರೋಗ್ಯಾಧಿಕಾರಿಗಳು ನೀರಿನ ಗುಣಮಟ್ಟದ ಪರೀಕ್ಷೆಯನ್ನು ನಿಯಮಿತವಾಗಿ ಮಾಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್ ಬಾಬು ಅವರು ಸೂಚಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read