ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಕಾಯಿದೆ, 1984 ರ ಕಲಂ 9 ರ ಅಡಿಯಲ್ಲಿ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು ಅಥವಾ ಕರ್ನಾಟಕ ಲೋಕಾಯುಕ್ತ ಕಾಯಿದೆ 1984 ರ ಕಲಂ 2 (12) ರ ಅಡಿಯಲ್ಲಿ ಸಾರ್ವಜನಿಕ ನೌಕರರ ದುರ್ನಡತೆಯ ವಿರುದ್ಧ ದೂರನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ.
ಒಬ್ಬ ವ್ಯಕ್ತಿ ತನಗಾದ ಅನ್ಯಾಯದ ಅಥವಾ ದುರಾಡಳಿತದ ಪರಿಣಾಮವಾಗಿ ತನಗಾದ ಅನಗತ್ಯವಾದ ತೊಂದರೆಯನ್ನು ವ್ಯಕ್ತಪಡಿಸಿ ನ್ಯಾಯವನ್ನು ಅಪೇಕ್ಷಿಸುವುದನ್ನು “ಕುಂದುಕೊರತೆ” ಎಂದು ಅರ್ಥೈಸಲಾಗಿರುತ್ತದೆ. ಸಾರ್ವಜನಿಕ ನೌಕರನಿಂದಾಗುವ ದುರ್ನಡತೆಗೆ ಸಂಬಂಧಪಟ್ಟಿರುವುದನ್ನು “ಆಪಾದನೆ” ಎನ್ನಲಾಗುತ್ತದೆ. ಸರ್ಕಾರಿ ಅಶಿಸ್ತು, ಸರ್ಕಾರಿ ಹುದ್ದೆಯ ದುರುಪಯೋಗ, ಸರ್ಕಾರಿ ಕೆಲಸಗಳ ನಿರ್ವಹಣೆಯಲ್ಲಿ ವೈಯಕ್ತಿಕ ಲಾಭಗಳ ಅಪೇಕ್ಷೆ, ಭ್ರಷ್ಟಾಚಾರ, ಪಕ್ಷಪಾತ ಧೋರಣೆ, ಸ್ವಜನ ಪಕ್ಷಪಾತ, ಅಪ್ರಾಮಾಣಿಕತೆ, ಕರ್ತವ್ಯ ನಿರ್ವಹಣೆಯಲ್ಲಿ ಅಸಮರ್ಪಕತೆ ಅಥವಾ ದುರುದ್ದೇಶಗಳು, ಪ್ರಾಮಾಣಿಕತೆಯ ಮಾನದಂಡಗಳ ಪ್ರಕಾರ ಕಾರ್ಯನಿರ್ವಹಣೆಯಲ್ಲಿ ಲೋಪ, ಅವಿವೇಕ, ಅನ್ಯಾಯ, ದಬ್ಬಾಳಿಕೆಯ ಅಥವಾ ಅಸಮರ್ಪಕ ತಾರತಮ್ಯದ ಕಾರ್ಯಾಚರಣೆ, ಉದ್ದೇಶಪೂರ್ವಕ ನಿರ್ಲಕ್ಷ್ಯ, ಕ್ರಮ ತೆಗೆದುಕೊಳ್ಳಲು ಅನಾವಶ್ಯಕ ವಿಳಂಬ ಮಾಡುವುದು ಇತ್ಯಾದಿಗಳನ್ನು ಆಪಾದನೆ ಒಳಗೊಂಡಿರುತ್ತದೆ.
ಕರ್ನಾಟಕ ಲೋಕಾಯುಕ್ತ ನಿಯಮಾವಳಿಗಳು, 1985 ರ ನಿಯಮ 4 ರ ಪ್ರಕಾರ ಪ್ರತಿಯೊಂದು ದೂರನ್ನು ಅಧಿಕೃತ ಅಧಿಕಾರಿ ಅಥವಾ ನೋಟರಿಯ ಮುಂದೆ ಸಮರ್ಪಕವಾಗಿ ಪ್ರಮಾಣೀಕರಿಸಿದ ಶಪಥಪತ್ರ ಸಹಿತವಾದ ನಮೂನೆ 2 ರೊಡನೆ ಫಿರ್ಯಾದಿ ಸಹಿಮಾಡಿರುವ ನಮೂನೆ 1 ರಲ್ಲಿ ಸಲ್ಲಿಸಬೇಕು. ಆದ್ದರಿಂದ, ದೂರನ್ನು ಸಲ್ಲಿಸಬಯಸುವವರು ಈ ಜಾಲತಾಣದಿಂದ ನಮೂನೆ 1 ಮತ್ತು 2 ನ್ನು ಡೌನ್ ಲೋಡ್ ಮಾಡಿಕೊಂಡು ಅವುಗಳನ್ನು ಸೂಕ್ತವಾಗಿ ದೃಢೀಕರಿಸಿ ವಿವರವಾದ ದೂರು ಮತ್ತು ಯಾವುದಾದರೂ ಸಂಬಂಧಪಟ್ಟ ದಾಖಲಾತಿಗಳಿದ್ದರೆ ಅವುಗಳ ಸಹಿತವಾಗಿ ಬೆಂಗಳೂರು, ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಯಲ್ಲಿ ನೇರವಾಗಿ ದಾಖಲಿಸಿ ಈ ಜಾಲತಾಣದ ಶೀರ್ಷಿಕೆ “ದೂರಿನ ಸ್ಥಿತಿ” ಯ ಅಡಿಯಲ್ಲಿ ಸದರಿ ದೂರಿನ ಸ್ಥಿತಿಯನ್ನು ತಿಳಿಯಬಹುದು.
ದೂರನ್ನು ದಾಖಲಿಸಲು ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಮುಖ್ಯ ಕಛೇರಿಗೆ ಅಥವಾ ಜಿಲ್ಲಾ ಲೋಕಾಯುಕ್ತ ಕಛೇರಿಗೆ ಫಿರ್ಯಾದಿ ಭೇಟಿ ನೀಡಿ ನಮೂನೆ 1 ಮತ್ತು 2 ರಲ್ಲಿ ದೂರನ್ನು ದಾಖಲಿಸಬಹುದು. ಕರ್ನಾಟಕ ಲೋಕಾಯುಕ್ತ ಸಂಸ್ಥೆಯ (ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಹೊರತುಪಡಿಸಿ) ಪ್ರತಿಯೊಂದು ಜಿಲ್ಲಾ ಕಛೇರಿಗಳಲ್ಲಿ ಆರಕ್ಷಕ ನಿರೀಕ್ಷಕರ ಹುದ್ದೆ ಅಥವಾ ಅದಕ್ಕಿಂತ ಉನ್ನತ ಶ್ರೇಣಿಯ ಆರಕ್ಷಕ ಅಧಿಕಾರಿಗಳು ಪ್ರಮಾಣೀಕರಿಸಲು ಅಧಿಕಾರ ಹೊಂದಿದ್ದು ನಮೂನೆ 2 ರ ಶಪಥಪತ್ರವನ್ನು ದೃಢೀಕರಿಸುತ್ತಾರೆ. ಇದರೊಡನೆ. ಪೊಲೀಸ್ ಅಧಿಕಾರಿಗಳು ತಾಲ್ಲೂಕು ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಸಹ ನಮೂನೆ 1 ಮತ್ತು 2 ರಲ್ಲಿ ದೂರನ್ನು ಅವರಿಗೆ ಹಸ್ತಾಂತರಿಸಬಹುದು.
ಟಿಪ್ಪಣಿ : ಕಛೇರಿಯ ಬಳಕೆಗಾಗಿ ಅಫಿಡವಿಟ್ಟುಗಳು ಮತ್ತು ದಸ್ತಾವೇಜುಗಳ ಪ್ರತಿಗಳನ್ನು ದ್ವಿಪ್ರತಿಯಲ್ಲಿ ಮತ್ತು ಎಷ್ಟು ಜನ ಸಾರ್ವಜನಿಕ ನೌಕರರ ವಿರುದ್ಧ ದೂರು ನೀಡಲಾಗಿದೆಯೋ ಅಷ್ಟು ಜೊತೆ (ಸೆಟ್ಟು) ಗಳಲ್ಲಿ ಲಗತ್ತಿಸತಕ್ಕದ್ದು.




