ತುಮಕೂರು: ಮಗಳಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ ತಂದೆಯ ಮೇಲೆ ಹಲ್ಲೆ ನಡೆಸಿ ಚಾಕುವಿನಿಂದ ಇರಿದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೊರಟಗೆರೆ ತಾಲೂಕಿನ ಎನ್. ದುರ್ಗಾ ಹೋಬಳಿಯ ಬೋರಪ್ಪನಹಳ್ಳಿ ಗ್ರಾಮದ ಗಿರೀಶ್ ಹಲ್ಲೆಗೊಳಗಾದವರು. 9ನೇ ತರಗತಿ ವಿದ್ಯಾರ್ಥಿನಿಯನ್ನು ಅದೇ ಗ್ರಾಮದ ಪೃಥ್ವಿರಾಜ್ ಎಂಬ ಯುವಕ ಪದೇ ಪದೇ ಚುಡಾಯಿಸುತ್ತಿದ್ದ. ಇದನ್ನು ಪ್ರಶ್ನಿಸಿದ ವಿದ್ಯಾರ್ಥಿನಿ ತಂದೆ ಗಿರೀಶ್ ಮೇಲೆ ಆರೋಪಿ ಪೃಥ್ವಿರಾಜ್, ಆತನ ಅಣ್ಣ ತಿಮ್ಮೇಗೌಡ ಮತ್ತು ತಂದೆ ಹನುಮಂತರಾಯ ಸೇರಿ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದು ತೊಡೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾರೆ.
ಗಿರೀಶ್ ಕಿರುಚಾಟ ಕೇಳಿದ ಗ್ರಾಮಸ್ಥರು ರಕ್ಷಣೆ ಮಾಡಿದ್ದು, ಗಾಯಗೊಂಡ ಗಿರೀಶನನ್ನು ತುಮಕೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.