ಕೊಪ್ಪಳ: ದೂರು ನೀಡಲು ಬಂದಾತನ ಮೇಲೆಯೇ ಹಲ್ಲೆ ನಡೆಸಿದ ಆರೋಪದ ಮೇಲೆ ಕೊಪ್ಪಳ ಜಿಲ್ಲೆ ಕುಕನೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗುರುರಾಜ್ ಟಿ. ಅವರನ್ನು ಅಮಾನತು ಮಾಡಲಾಗಿದೆ.
ಪಿಎಸ್ಐ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೊಪ್ಪಳ ತಾಲೂಕಿನ ಯಲಮಗೇರಿಯ ಗಾಳೆಪ್ಪ ಹಿರೇಮನಿ ದೂರು ನೀಡಿದ್ದರು. ದಲಿತ ಸಮುದಾಯದ ಮುಖಂಡರು ಮಂಗಳವಾರ ರಾತ್ರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು. ಪಿಎಸ್ಐ ಗುರುರಾಜ್ ಅವರನ್ನು ಅಮಾನತು ಮಾಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದ್ದರು.
ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ಅವರೊಂದಿಗೆ ದೂರವಾಣಿ ಮೂಲಕ ಚರ್ಚೆ ನಡೆಸಿದ ಕೊಪ್ಪಳ ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮ್ ಎಲ್. ಅರಸಿದ್ದಿ ಅವರು ಪಿಎಸ್ಐ ಗುರುರಾಜ್ ಅವರನ್ನು ಅಮಾನತು ಮಾಡಿದ್ದಾರೆ.