ಮಂಡ್ಯ: ಅನಾರೋಗ್ಯದಿಂದಾಗಿ ಅಸ್ವಸ್ಥಗೊಂಡಿದ್ದ ಯುವತಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಪರಿಶೀಲನೆ ನಡೆಸಿದ ವೈದ್ಯರು ಯುವತಿ ಮೃತಪಟ್ಟಿರುವುದನ್ನು ಖಚಿತಪಡಿಸುತ್ತಿದ್ದಂತೆ ಆಕೆಯ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಆಸ್ಪತ್ರೆಯ ಬಾಗಿಲು, ಗ್ಲಾಸ್ ಒಡೆದು ಹಾಕಿ ಔಷಧಗಳನ್ನು ನಾಶಪಡಿಸಿದ್ದಾರೆ.
ಮಳವಳ್ಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿಫಾ ಮೃತಪಟ್ಟವರು. ಹಲಗೂರಿನ ತನ್ನ ಅಜ್ಜಿಯ ಮನೆಗೆ ಬಂದಿದ್ದ ಶಿಫಾಗೆ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದು, ಹಲಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ನಂತರ ತೀವ್ರ ಅಸ್ವಸ್ಥಳಾಗಿದ್ದ ಶಿಫಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಳವಳ್ಳಿ ತಾಲೂಕು ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ಕರ್ತವ್ಯದಲ್ಲಿದ್ದ ಡಾ. ಮುರಳಿ ಪರಿಶೀಲಿಸಿ ಶಿಫಾ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಇದರಿಂದ ಉದ್ವೇಗಗೊಂಡ ಯುವಕರು ತುರ್ತು ಚಿಕಿತ್ಸಾ ಕೊಠಡಿಯ ಬಾಗಿಲು ಗಾಜುಗಳನ್ನು ಒಡೆದು ಹಾಕಿ ಔಷಧಗಳನ್ನು ನಾಶ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆಸ್ಪತ್ರೆಯ ಆಡಳಿತ ಅಧಿಕಾರಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.