ಉಡುಪಿ : ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗುತ್ತಿದ್ದ ವೇಳೆ ಎಎಸ್ ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಮಹೇಶ್ ತಿಮರೋಡಿಯ ಮೂವರು ಬೆಂಬಲಿಗರನ್ನು ಬಂಧಿಸಲಾಗಿದೆ.
ಬಂಧಿತರನ್ನು ಸೃಜಯ್, ಹಿತೇಶ್ ಹಾಗೂ ಸಹನ್ ಎಂದು ಗುರುತಿಸಲಾಗಿದೆ. ಉಡುಪಿ ಜಿಲ್ಲೆ ಕಾರ್ಕಾಳ ತಾಲೂಕಿನ ಹೊಸಮಾರು ಬಳಿ ಈ ಘಟನೆ ನಡೆದಿದೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಬಂಧಿಸಿ ಕರೆದುಕೊಂಡು ಹೋಗಲಾಗುತ್ತಿತ್ತು. ಈ ವೇಳೆ ಎಎಸ್ಪಿ ಕಾರು ಕೂಡ ಪೊಲೀಸರೊಟ್ಟಿಗೆ ತೆರಳುತ್ತಿತ್ತು. ಈ ವೇಳೆ ಮಹೇಶ್ ಶೆಟ್ಟಿ ಬೆಂಬಲಿಗರು ಎಎಸ್ಪಿ ಕಾರಿಗೆ ಹಿಂಬದಿಯಿಂದ ಗುದ್ದಿದ್ದಾರೆ. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.ಮಹೇಶ್ ಶೆಟ್ಟಿ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು ಸಂಚಾರಿ ಪೀಠದಿಂದ ಆದೇಶ ನೀಡಲಾಗಿದೆ. ಉಡುಪಿಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಪೊಲೀಸರು ಬಂಧಿಸಿದ್ದರು.