BREAKING: ಗೃಹಜ್ಯೋತಿ ಯೋಜನೆ ವಿಸ್ತರಣೆ, ಗೃಹಬಳಕೆಯ ಎಲ್ಲ ಗ್ರಾಹಕರಿಗೆ ಸೌಲಭ್ಯ ದೊರಕಿಸಲು ಸರ್ಕಾರಕ್ಕೆ ಮನವಿ

ಶಿವಮೊಗ್ಗ: ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು 2023-24 ಮತ್ತು 2024-25 ನೇ ಸಾಲಿನ ವಿದ್ಯುತ್ ಬಳಕೆಯ ಸರಾಸರಿ ಪರಿಗಣಿಸಿ ಲೆಕ್ಕೀಕರಿಸುವ ನಿಯಮವನ್ನು ವಿಸ್ತರಿಸಿ ಎಲ್ಲ ಗೃಹ ಬಳಕೆಯ ಗ್ರಾಹಕರಿಗೆ ಗೃಹಜ್ಯೋತಿ ಸೌಲಭ್ಯ ದೊರಕಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರ ಸಭೆಯು ಒಮ್ಮತದ ನಿರ್ಣಯ ಅಂಗೀಕರಿಸಿದೆ.

ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಸಲಾಗಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗೃಹಜ್ಯೋತಿ ಯೋಜನೆಯನ್ವಯ 2022-23 ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆಯನ್ನು ಪರಿಗಣಿಸಿ ಲೆಕ್ಕೀಕರಿಸಿ 200 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲು ಸರ್ಕಾರದ ಆದೇಶದಲ್ಲಿ ಉಲ್ಲೇಖಿಸದೇ ಇರುವ ಕಾರಣ 2023-24 ನೇ ಸಾಲಿನ ವಿದ್ಯುತ್ ಬಳಕೆಯನ್ನು ಪರಿಗಣಿಸಲು ಗ್ರಾಹಕರು ಒಳಪಡುವುದಿಲ್ಲವೆಂದು ಮೆಸ್ಕಾಂ ಕಾ ಮತ್ತು ಪಾ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ಇವರಿಗೆ ಲಿಖಿತ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.

ಆದರೆ 2022-23 ನೇ ಸಾಲಿನಲ್ಲಿ ವಿದ್ಯುತ್ ಬಳಕೆದಾರರು ಅನಿವಾರ್ಯ ಕಾರಣಗಳಿಂದಾಗಿ 200 ಯುನಿಟ್‌ಗಿಂತ ಹೆಚ್ಚು ಬಳಕೆ ಮಾಡಿದವರು ಮತ್ತು ಬಾಡಿಗೆ ಮನೆಯನ್ನು ಬದಲಾವಣೆ ಮಾಡಿದರೂ ಪುನಃ 2023-24 ನೇ ಸಾಲಿನಲ್ಲಿ ವಿದ್ಯುತ್ ಬಳಕೆಯನ್ನು ಪರಿಗಣಿಸಿ ಸರಾಸರಿ ಲೆಕ್ಕೀಕರಿಸುವ ನಿಯಮ ಇಲ್ಲದೇ ಇರುವುದರಿಂದ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಉಚಿತ ವಿದ್ಯುತ್ ಸೌಲಭ್ಯ ಪಡೆಯಲು ಬಹಳಷ್ಟು ಕುಟುಂಬದವರು ಪ್ರಾಧಿಕಾರದ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿ 2023-24 ನೇ ಸಾಲಿಗೂ ವಿಸ್ತರಿಸಲು ಮನವಿ ಮಾಡಿಕೊಂಡಿದ್ದಾರೆ.

ಆದ್ದರಿಂದ 2023-24 ನೇ ಸಾಲಿನಲ್ಲಿ ಗೃಹಜ್ಯೋತಿ ಫಲಾನುಭವಿಗಳಿಗೆ ಅವಕಾಶ ಕಲ್ಪಿಸಿಕೊಟ್ಟು ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಲು 2023-24 ಮತ್ತು 2024-25 ನೇ ಸಾಲಿನಲ್ಲಿ ಗ್ರಾಹಕರ ವಿದ್ಯುತ್ ಬಳಕೆಯನ್ನು ಪರಿಗಣಿಸಿ ಸರಾಸರಿ ಲೆಕ್ಕೀಕರಿಸುವ ಪದ್ದತಿಯನ್ನು ವಿಸ್ತರಿಸಿ ಎಲ್ಲಾ ಗ್ರಾಹಕರಿಗೆ ಗೃಹಜ್ಯೋತಿ ಸೌಲಭ್ಯ ದೊರಕಿಸಲು ಅನುವು ಮಾಡಿಕೊಡಬೇಕೆಂದು ಚಂದ್ರಭೂಪಾಲ್ ಸರ್ಕಾರಕ್ಕೆ ಮನವಿ ಮಾಡಿದರು.

ಪಡಿತರ ತೆಗೆದುಕೊಳ್ಳುವ ವೇಳೆ ಕೆಲವರ ಬಯೋಮಟ್ರಿಕ್ ಕ್ಯಾಪ್ಚರ್ ಆಗುತ್ತಿಲ್ಲ ಇದಕ್ಕೆ ಏನು ಮಾಡಬೇಕೆಂದು ಸದಸ್ಯರು ಕೇಳಿದರು.

ಆಹಾರ ಇಲಾಖೆ ಉಪನಿರ್ದೇಶಕ ಅವಿನ್, ಏಕ ಮತ್ತು ದ್ವಿಸದಸ್ಯ ಇರುವ ಪಡಿತರ ಚೀಟಿದಾರರು ಬಯೋಮೆಟ್ರಿಕ್ ಬರುತ್ತಿಲ್ಲವೆಂದು ಅರ್ಜಿ ನೀಡಿ ಇದರಿಂದ ವಿನಾಯಿತಿ ಪಡೆಯಬಹುದು ಎಂದರು.

ಗೃಹಕ್ಷ್ಮಿ ಯೋಜನೆಯಡಿ ನೋಂದಣಿಯಾದ ಕೆಲವರ ಎನ್‌ಪಿಸಿಐ ಫೇಲ್ ಯಾಕಾಗುತ್ತದೆ. ಇದನ್ನು ಸರಿಪಡಿಸಲು ಫಲಾನುಭವಿಗಳು ಏನು ಕ್ರಮ ಕೈಗೊಳ್ಳಬೇಕೆಂದು ಮಾಹಿತಿ ನೀಡಬೇಕೆಂದು ಸದಸ್ಯರು ಕೋರಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ, ಎನ್‌ಪಿಸಿಐ ಫೇಲ್‌ಗೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ನೀಡಿ, ಗೃಹಲಕ್ಷ್ಮಿ ಯೋಜನೆಯಡಿ ಜಿಲ್ಲೆಯು ಶೇ.94.12 ನೋಂದಣಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲೇ ಅಗ್ರಸ್ಥಾನ ಪಡೆದಿದೆ ಎಂದರು.

ಸದಸ್ಯರು, ಹೊಸನಗರ ತಾಲ್ಲೂಕಿಗೆ ಶಕ್ತಿ ಯೋಜನೆ ಸೌಲಭ್ಯ ಇಲ್ಲವಾಗಿದ್ದು ಮಹಿಳೆಯರು ಮತ್ತು ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿರುವುದರಿಂದ ಸರ್ಕಾರಿ ಬಸ್ ಬಿಡುವ ಮೂಲಕ ಶಕ್ತಿ ಯೋಜನೆಯನ್ನು ತಾಲ್ಲೂಕಿಗೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

ಶಿವಮೊಗ್ಗ ನಗರದಲ್ಲಿ ಸಾರಿಗೆಯನ್ನು ಹೆಚ್ಚಿಸಬೇಕು. ಸರ್ಕಾರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಅಧ್ಯಕ್ಷರು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.

ಸಭೆಯಲ್ಲಿ ಯೋಜನಾ ಸಮಿತಿಯ ನೂತನ ಸದಸ್ಯರಾದ ಶಿಕಾರಿಪುರ ತಾಲ್ಲೂಕಿನ ಜಕ್ಕಿನಕೊಪ್ಪ ಗ್ರಾಮದ ನವುಲೇಶಪ್ಪ ಅವರನ್ನು ಅಧ್ಯಕ್ಷರು ಸ್ವಾಗತಿಸಿದರು.

ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಸುರೇಶ್ ಮಾತನಾಡಿ, ಜಿಲ್ಲೆಯಲ್ಲಿ ಫೆ.24 ರಂದು ನಡೆದ ಉದ್ಯೋಗ ಮೇಳದಲ್ಲಿ 39 ಕಂಪೆನಿಗಳು ಪಾಲ್ಗೊಂಡಿದ್ದವು. 4132 ಅಭ್ಯರ್ಥಿಗಳು ಆನ್‌ಲೈನ್ ನೋಂದಣಿ ಮಾಡಿಕೊಂಡಿದ್ದು, 2775 ಅಭ್ಯರ್ಥಿಗಳು ಹಾಜರಾಗಿದ್ದರು. 683 ಅಭ್ಯರ್ಥಿಗಳ ಶಾರ್ಟ್ಲಿಸ್ಟ್ ಆಗಿದ್ದು, 324 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. 15 ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ನೇಮಕಾತಿ ಆದೇಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read