ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ರಾಮಮೂರ್ತಿಯೊಂದಿಗೆ ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ ನಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದಾರೆ.
ಮದುವೆ ಬಳಿಕ ಅನುಶ್ರೀ ಹಾಗೂ ಪತಿ ರೋಷನ್ ಸುದ್ದಿಗೋಷ್ಠಿ ನಡೆಸಿದ್ದು, ತಮ್ಮ ಸಿಂಪಲ್ ಲವ್ ಸ್ಟೋರಿ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆ ತುಂಬಾ ಸುಂದರವಾಗಿ, ಸರಳವಾಗಿ ನೆರವೇರಿದೆ. ಬಹಳ ಕಡಿಮೆ ಜನರ ಎದುರು ವಿವಾಹವಾಗಬೇಕು ಎಂಬ ಆಸೆಯಿತ್ತು ಎಂದು ಅನುಶ್ರೀ ತಿಳಿಸಿದ್ದಾರೆ.
ಅವರ ಹೆಸರಿ ರೋಷನ್ ರಾಮಮೂರ್ತಿ. ಕುಶಾಲನಗರದವರು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ನನ್ನ ಮದುವೆಯಾಗಿದ್ದಾರೆ. ಮದುವೆಗೆ ಬಂದ ಎಲ್ಲರಿಗೂ ಧನ್ಯವಾದಗಳು. ನಮ್ಮದು ಸಿಂಪಲ್ ಲವ್ ಸ್ಟೋರಿ. ಅದನ್ನು ಯಾರೂ ನಂಬುವುದಿಲ್ಲ. ಮೊದಲು ನಾವಿಬ್ಬರೂ ಫ್ರೆಂಡ್ಸ್ ಆದೆವು. ಬಳಿಕ ಕಾಫಿ ಕುಡಿದೆವು. ನಾವಿಬ್ಬರೂ ಜೀವನವನ್ನು ತುಂಬಾ ಸರಳವಾಗಿ ನೋಡುವವರು. ಚಿಕ್ಕ ಚಿಕ್ಕ ಸಂತೋಷವನ್ನೂ ಬಹಳ ಇಷ್ಟಪಡುತ್ತೇವೆ. ಅವರಿಗೆ ಸಹಾಯಮಾಡುವ ಮನೋಭಾವ ಇದೆ. ಅದು ಬಹಳ ಇಷ್ಟವಾಯಿತು. ನನಗೆ ಅವರು, ಅವರಿಗೆ ನಾನು ಇಷ್ಟ ಆದೆ. ಇಬ್ಬರೂ ಮದೆವೆಯಾದೆವು ಎಂದು ತಿಳಿಸಿದ್ದಾರೆ.
ಪುನೀತ್ ಪರ್ವ ಕಾರ್ಯಕ್ರಮದಲ್ಲಿ ನಾವು ಭೇಟಿಯಾಗಿದ್ದು. ಒಂದು ಲೆಕ್ಕದಲ್ಲಿ ಅಪ್ಪು ಸರ್ ಅವರೇ ನಮ್ಮನ್ನು ಸೇರಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ರೋಷನ್ ರಾಮಮೂರ್ತಿ, ೫ ವರ್ಷದಿಂದ ಅನುಶ್ರೀ ಪರಿಚಯ. ಕಳೆದ ಮೂರು ವರ್ಷಗಳಿಂದ ಹೆಚ್ಚು ಆಪ್ತರಾದೆವು. ಅನುಶ್ರೀ ತುಂಬಾ ಸಿಂಪಲ್ ಹುಡುಗಿ. ನನಗೆ ಎಂದೂ ಅವರೊಬ್ಬ ಸೆಲೆಬ್ರಿಟಿ ಅನಿಸಲೇ ಇಲ್ಲ. ಅವರ ಆ ಗುಣವೇ ನನಗೆ ತುಂಬ ಇಷ್ಟ ಆಯಿತು. ನಾನು ಕೋಟ್ಯಧಿಪತಿ ಅಲ್ಲ. ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ. ಇನ್ನು ನಾವಿಬ್ಬರೂ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತೇವೆ ಎಂದು ಹೇಳಿದರು.