ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10ರಂದು ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಆಗಸ್ಟ್ 11ರಿಂದ ಸಾರ್ವಜನಿಕ ಪ್ರಯಾಣಕ್ಕೆ ಹಳದಿ ಮೆಟ್ರೋ ಮಾರ್ಗ ಮುಕ್ತವಾಗಿದೆ.
ಇದೀಗ ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಹಳದಿ ಮೆಟ್ರೋ ನಿಲ್ದಾಣಗಳಿಂದ ಬಿಎಂಟಿಸಿ ಫೀಡರ್ ಬಸ್ ಸೇವೆ ಆರಂಭಿಸಿದೆ. ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಆರ್.ವಿ. ರಸ್ತೆ, ಬೊಮ್ಮಸಂದ್ರ ಮಾರ್ಗದಲ್ಲಿ ಬಿಎಂಟಿಸಿ ಹೊಸದಾಗಿ ಫೀಡರ್ ಬಸ್ ಗಳ ಕಾರ್ಯಾಚರಣೆ ಕೈಗೊಂಡಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ಹಳದಿ ಮಾರ್ಗದಲ್ಲಿ ಸಂಸ್ಥೆಯು ಒಟ್ಟು 4 ಮಾರ್ಗಗಳಲ್ಲಿ ಫೀಡರ್ ಬಸ್ ಸೇವೆ ಆರಂಭಿಸಿದ್ದು, 12 ಬಸ್ ಗಳು 96 ಟ್ರಿಪ್ ಕಾರ್ಯಾಚರಣೆ ನಡೆಸಲಿವೆ. ಎಲೆಕ್ಟ್ರಾನಿಕ್ ಸಿಟಿ, ಇನ್ಫೋಸಿಸ್ ಫೌಂಡೇಶನ್, ಕೋನಪ್ಪನ ಅಗ್ರಹಾರ, ಹೆಬ್ಬಗೋಡಿ, ಬೊಮ್ಮಸಂದ್ರ ಸೇರಿದಂತೆ ಒಟ್ಟು 6 ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಇದರಿಂದಾಗಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗಲಿದೆ.