BIG NEWS : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಪ್ರತಿಭಾ ಕಾರಂಜಿ’ ನಡೆಸುವಂತೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ..!

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ‘ಪ್ರತಿಭಾಕಾರಂಜಿ’ ನಡೆಸುವಂತೆ ‘ಶಿಕ್ಷಣ ಇಲಾಖೆ’ ಮಹತ್ವದ ಸುತ್ತೋಲೆ ಹೊರಡಿಸಿದೆ.

ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು 2002ನೇ ಸಾಲಿನಿಂದ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕಾರ್ಯಕ್ರಮವು ಶಿಕ್ಷಣ ಕ್ಷೇತ್ರದಲ್ಲಿ ಕಲೆಗಳನ್ನು ಉತ್ತೇಜಿಸುವ ಮೂಲಕ ಶಾಲಾ ವಿದ್ಯಾರ್ಥಿಗಳ ಕಲಾತ್ಮಕ ಪ್ರತಿಭೆಯನ್ನು, ಸೃಜನಾತ್ಮಕ ಕೌಶಲ್ಯಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ.

2023-24ನೇ ಸಾಲಿನಲ್ಲಿ ರಾಜ್ಯವಲಯದ ಮುಂದುವರೆದ ಯೋಜನಾ ಕಾರ್ಯಕ್ರಮದಡಿಯಲ್ಲಿ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾಮಕ್ಕಳಿಗೆ (1 ರಿಂದ 10ನೇ ತರಗತಿ) ಏಕ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಸ್ಪರ್ಧೆಗಳನ್ನು ಮತ್ತು 09 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ, ಕಲೋತ್ಸವ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಸ್ಪರ್ಧೆಗಳನ್ನು ನಡೆಸುವ ವಿಧಾನ ಕುರಿತಂತೆ ಲಗತ್ತಿಸಿರುವ ಅನುಬಂಧ-1,2,3 ಹಾಗೂ 4 ರಲ್ಲಿ ವಿವರಿಸಲಾಗಿದ್ದು, ಅದರಂತೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಎಲ್ಲಾ ಹಂತದ ಅಧಿಕಾರಿಗಳು ಸಮುದಾಯದ ಸಹಕಾರದೊಂದಿಗೆ ಸ್ಥಳೀಯ ಹಬ್ಬದ ರೀತಿಯಲ್ಲಿ ಉತ್ತಮವಾಗಿ ಆಯೋಜಿಸಲು ಸೂಚಿಸಿದೆ.

ಸ್ಪರ್ಧೆಗಳ ಆಯೋಜನೆ ಮತ್ತು ಸ್ಪರ್ಧಾ ನಿಯಮಗಳು

ಇದು ಮಹತ್ವದ ಕಾರ್ಯಕ್ರಮವಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾಗಿರುವುದರಿಂದ ಶಾಲಾ ಹಂತದಲ್ಲಿ ಹೆಚ್ಚು ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು.

• ಎಲ್ಲಾ ವಿಭಾಗಗಳಲ್ಲಿ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ ಯಾವುದಾದರೂ 2 ವಿಷಯಗಳಲ್ಲಿ ಮಾತ್ರ ಮತ್ತು ಸಾಮೂಹಿಕ ವಿಭಾಗದಲ್ಲಿ ಯಾವುದಾದರೂ 1 ವಿಷಯದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿದೆ.

• ಯಾವುದೇ ವೈಯಕ್ತಿಕ ಹಾಗೂ ಸಾಮೂಹಿಕ ವಿಭಾಗದ ಸ್ಪರ್ಧಾ ವಿಷಯದಲ್ಲಿ ಕನಿಷ್ಠ 3 ವಿದ್ಯಾರ್ಥಿಗಳು/ 3 ಗುಂಪುಗಳು ಭಾಗವಹಿಸಬೇಕು. ಭಾಷಾ ಅಲ್ಪ ಸಂಖ್ಯಾತ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ನಿಗಧಿ ಇರುವುದಿಲ್ಲ. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಸಿ. ಬಹುಮಾನ ಘೋಷಣೆ ಮಾಡಿ ಉಳಿದ ಮೊತ್ತವನ್ನು ಸರ್ಕಾರದ ಲೆಕ್ಕಶೀರ್ಷಿಕೆ ಜಮಾ ಮಾಡುವುದು.

ಇದು ಎಲ್ಲಾ ಹಂತದ /ವಿಭಾಗಗಳ ಸ್ಪರ್ಧೆಗಳಿಗೂ ಅನ್ವಯಿಸುತ್ತದೆ.ಚಿತ್ರಕಲಾ ಸ್ಪರ್ಧೆಗೆ ಸಂಬಂಧಿಸಿದಂತೆ ಬಣ್ಣ, ಬ್ರಷ್ ಇತ್ಯಾದಿಗಳನ್ನು ಸ್ಪರ್ಧಾಳುಗಳೇ ತರಬೇಕು. ಸಂಘಟಕರು ಕಡ್ಡಾಯವಾಗಿ ಸ್ಪರ್ಧಿಗಳಿಗೆ ಒಂದೇ ಅಳತೆಯ ಡ್ರಾಯಿಂಗ್ ಶೀಟ್ ನೀಡುವುದು.

ಜಾನಪದ ನೃತ್ಯ, ಕೋಲಾಟ ಇವುಗಳಿಗೆ ಉಡುಪು, ವರ್ಣಾಲಂಕಾರ, ಪಕ್ಕವಾದ್ಯ, ಹಾಡುಗಾರಿಕೆ ಇವುಗಳನ್ನು ಸ್ಪರ್ಧಾರ್ಥಿಗಳೇ ಒದಗಿಸಿಕೊಳ್ಳಬೇಕು.ಪ್ಲೇ ಮಾಡಲಿಂಗ್ ಗೆ ಜೇಡಿ ಮಣ್ಣನ್ನು ಸ್ಪರ್ಧಾಳುಗಳೇ ತರಬೇಕು.  ರಂಗೋಲಿ ಸ್ಪರ್ಧೆಗೆ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು.

ಸ್ಪರ್ಧೆಗಳ ದಿನಾಂಕ ಮತ್ತು ಇನ್ನಿತರ ವಿವರಗಳನ್ನು ನಿಗಧಿ ಪಡಿಸಿರುವಂತೆ ಎಲ್ಲಾ ಶಾಲೆಗಳಿಗೂ ಸಾಕಷ್ಟು ಮುಂಚಿತವಾಗಿ ಸುತ್ತೋಲೆಗಳನ್ನು ಕಳುಹಿಸಿ, ಅರ್ಹ ವಿದ್ಯಾರ್ಥಿಗಳು ಈ ಅವಕಾಶದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read