ಕೊಪ್ಪಳ : ವಿಧಿ ಅಟ್ಟಹಾಸ ಎಂದರೆ ಇದೇ ಅಲ್ಲವೇ..? ಸಾವು ಯಾವಾಗ..? ಹೇಗೆ..? ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳುವುದಕ್ಕೆ ಆಗಲ್ಲ.
ಹೌದು. ಜೋಡಿಯೊಂದು ಎಂಗೇಜ್ ಮೆಂಟ್ ಮಾಡಿಕೊಂಡು ಮದುವೆ ಮಾಡಿಕೊಳ್ಳುವ ಸಂಭ್ರಮದಲ್ಲಿದ್ದರು. ಮದುವೆ ಆಗಿ ಹೊಸ ಬಾಳು ಶುರು ಮಾಡುವ ಆಸೆಯಲ್ಲಿದ್ದರು. ಅದಕ್ಕೂ ಮುನ್ನವೇ ಭಾವಿ ದಂಪತಿಗಳು ಇಹಲೋಕ ತ್ಯಜಿಸಿದ್ದಾರೆ.
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬರುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಭಾವಿ ದಂಪತಿ ಮೃತಪಟ್ಟಿದ್ದಾರೆ.ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಿಕ್ಕಬಣಕಲ್ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ,
ಮೃತರನ್ನ ಕೊಪ್ಪಳ ತಾಲೂಕಿನ ಇರಕಲ್ಲಗಢ ಗ್ರಾಮದ ಕರಿಯಪ್ಪ ಮಡಿವಾಳ(26), ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಕವಿತಾ(19) ಎಂದು ಗುರುತಿಸಲಾಗಿದೆ. ಡಿಸೆಂಬರ್ 21ರಂದು ಇವರಿಬ್ಬರ ಮದುವೆ ನಿಶ್ಚಯವಾಗಿತ್ತು.
ಆದರೆ ಬೈಕ್ ಮತ್ತು ಲಾರಿಯ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ.ಮದುವೆ ಸಿದ್ಧತೆಯಲ್ಲಿದ್ದ ಇವರು ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಲು ತೆರಳಿದ್ದರು.ಐದು ತಿಂಗಳ ಹಿಂದೆ ನಿಶ್ಚಿತಾರ್ಥ ನೆರವೇರಿತ್ತು. ಮುನಿರಾಬಾದ್ ಸುತ್ತಮುತ್ತ ಫೋಟೋ ಮತ್ತು ವಿಡಿಯೋ ತೆಗೆಸಿಕೊಂಡು ಸಂಭ್ರಮಿಸಿದ್ದರು. ಮದುವೆ ಪೂರ್ವಭಾವಿಯಾಗಿ ಶೂಟಿಂಗ್ ಮುಗಿಸಿ ಗಂಗಾವತಿ ಮಾರ್ಗವಾಗಿ ಮುಸ್ಟೂರು ಗ್ರಾಮಕ್ಕೆ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಘಟನೆ ಸಂಬಂಧ ಲಾರಿ ಚಾಲಕನನನ್ನು ಪೊಲೀಸರು ಬಂಧಿಸಿದ್ದಾರೆ.
