ಪಣಜಿ: ಖಾನಾಪುರದ ಮಾಜಿ ಶಾಸಕಿ, ವೈದ್ಯರಾದ ಡಾ. ಅಂಜಲಿ ನಿಂಬಾಳ್ಕರ್ ವಿಮಾನದಲ್ಲೇ ಅಮೆರಿಕ ಯುವತಿಯೊಬ್ಬರ ಜೀವ ಉಳಿಸಿದ ಘಟನೆ ನಡೆದಿದೆ.
ಗೋವಾದಿಂದ ದೆಹಲಿಗೆ ಹೊರಟಿದ್ದ ವಿಮಾನದಲ್ಲಿ ಅಂಜಲಿ ನಿಂಬಾಳ್ಕರ್ ಪ್ರಯಾಣ ಬೆಳೆಸಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಮೆರಿಕ ಮೂಲದ ಯುವತಿಗೆ ಇದ್ದಕ್ಕಿದ್ದಂತೆ ಕೈಕಾಲುಗಳಲ್ಲಿ ನಡುಕ ಉಂಟಾಗಿ ಮೂರ್ಛೆ ಹೋಗಿದ್ದಾಳೆ. ನಾಡಿ ಮಿಡಿತ ಕೂಡ ನಿಂತು ಹೋಗಿರುವುದು ಕಂಡುಬಂದಿದೆ. ಇದನ್ನು ಗಮನಿಸಿದ ಅಂಜಲಿ ನಿಂಬಾಳ್ಕರ್ ಯುವತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಜೀವ ಉಳಿಸಿದ್ದಾರೆ.
ಶ್ವಾಸಕೋಶದ ಮೇಲೆ ಎರಡು ಕೈಗಳನ್ನು ಇಟ್ಟು ಪಂಪ್ ಮಾಡಿದ್ದು, ಆಕೆ ಉಸಿರಾಡಲು ಶುರು ಮಾಡಿದ್ದಾಳೆ. ಅರ್ಧ ಗಂಟೆಯಲ್ಲಿ ಮತ್ತೆ ಕುಸಿದು ಬಿದ್ದಿದ್ದು, ನಿಂಬಾಳ್ಕರ್ ಅವರ ಪ್ರಯತ್ನದಿಂದ ಮತ್ತೆ ಜೀವ ಉಳಿದಿದೆ. ಪಕ್ಕದಲ್ಲಿ ಇದ್ದು ಆರೋಗ್ಯ ಸ್ಥಿತಿ ನೋಡಿಕೊಂಡ ಅಂಜಲಿ ನಿಂಬಾಳ್ಕರ್ ವಿಮಾನ ದೆಹಲಿ ನಿಲ್ದಾಣ ತಲುಪುತ್ತಿದ್ದಂತೆ ಆಂಬುಲೆನ್ಸ್ ನಲ್ಲಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಅಂಜಲಿ ನಿಂಬಾಳ್ಕರ್ ಅವರ ಪ್ರಯತ್ನಕ್ಕೆ ಪೈಲಟ್ ಸೇರಿದಂತೆ ವಿಮಾನದ ಸಿಬ್ಬಂದಿ, ಸಹ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
