ಸಕ್ಕರೆ MSP, ಎಥೆನಾಲ್ ಹಂಚಿಕೆ, ಸಕ್ಕರೆ ರಫ್ತು ಮಿತಿ ಹೆಚ್ಚಳಕ್ಕೆ ಆಗ್ರಹಿಸಿ ದೆಹಲಿಗೆ ಸರ್ವಪಕ್ಷ ನಿಯೋಗ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಸಕ್ಕರೆ ಎಂಎಸ್‌ಪಿ ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೇಂದ್ರಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದೇವೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ಸಂಬಂಧ ನಡೆದ ಏಳು ಗಂಟೆಗಳ ನಿರಂತರ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು;

ನಾವು ನಾಡಿನ ರೈತರ ಹಿತವನ್ನೇ ಮುಖ್ಯವಾಗಿಸಿಕೊಂಡು ದೃಢ ನಿರ್ಧಾರಕ್ಕೆ ಬಂದಿದ್ದೇವೆ. ಪ್ರತಿ ಟನ್ ಕಬ್ಬಿಗೆ ₹3,300 ಕೊಡಲು ನಿರ್ಧರಿಸಿದೆ.

ಸರ್ಕಾರ ಮತ್ತು ಕಾರ್ಖಾನೆ ಮಾಲೀಕರು ತಲಾ ₹50 ಸೇರಿಸಿ ರೈತರಿಗೆ ಟನ್ ಗೆ ₹3,300 ಕೊಡಲು ತೀರ್ಮಾನ ಮಾಡಲಾಗಿದೆ.

ರಾಜ್ಯದಲ್ಲಿ 81 ಸಕ್ಕರೆ ಕಾರ್ಖಾನೆಗಳಿವೆ. ಇವುಗಳಲ್ಲಿ 11 ಸಹಕಾರಿ ಕಾರ್ಖಾನೆಗಳು, ಒಂದು ಕಾರ್ಖಾನೆ ಮಾತ್ರ ಸರ್ಕಾರಿ ಸೌಮ್ಯದ್ದು. ಉಳಿದವೆಲ್ಲಾ ಖಾಸಗಿ ಸಕ್ಕರೆ ಕಾರ್ಖಾನೆಗಳಾಗಿವೆ.

ಅಕ್ಟೋಬರ್ 30ರಿಂದ ಬೆಳಗಾವಿ ರೈತರು ಕೇಂದ್ರ ಸರ್ಕಾರದ ಎಫ್ಆರ್‌ಪಿ ದರ ವಿರೋಧಿಸಿ ಇನ್ನೂ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಪ್ರತಿಭಟನಾ ನಿರತ ರೈತ ಮುಖಂಡರ ಜೊತೆಗೆ ಬೆಳಗಾವಿ ಜಿಲ್ಲಾಧಿಕಾರಿಗಳು ಮಾತುಕತೆ ನಡೆಸಿದ್ದರು. ಆದರೆ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಸಚಿವರನ್ನು ಮಾತುಕತೆಗೆ ಕಳುಹಿಸಿದ್ದೆ.

10.25 ಇಳುವರಿ ಇರುವ ಕಬ್ಬಿಗೆ 3,100 ರೂ, 11.25 ಇಳುವರಿ ಕಬ್ಬಿಗೆ 3,200 ರೂ. ಕೊಡುವುದಾಗಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಭಟನಾ ರೈತರು ಒಪ್ಪಿಲ್ಲ. ಕಾನೂನು ಸಚಿವರಾದ ಹೆಚ್.ಕೆ.ಪಾಟೀಲ್, ಸಕ್ಕರೆ ಸಚಿವರಾದ ಶಿವಾನಂದ ಪಾಟೀಲರು ಮಾತುಕತೆ ನಡೆಸಿದರೂ ರೈತರು ಒಪ್ಪಿಲ್ಲ. ಬಳಿಕ ಕ್ಯಾಬಿನೆಟ್ ನಲ್ಲಿ ಚರ್ಚಿಸಿ, “ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಜೊತೆ ಚರ್ಚೆ ನಡೆಸುವ ಜೊತೆಗೆ ಸಮಸ್ಯೆ ಸೃಷ್ಟಿಸಿರುವ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಗಿತ್ತು.

ಕ್ಯಾಬಿನೆಟ್ ತೀರ್ಮಾನದಂತೆ ಇಂದು ಬೆಳಗ್ಗೆಯಿಂದ ಸತತ 7 ಗಂಟೆ ಕಾಲ ಸಭೆ ನಡೆಸಿದ್ದೇವೆ. ಈ ವೇಳೆ ಕಾರ್ಖಾನೆ ಮಾಲೀಕರು ಮತ್ತು ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇಬ್ಬರೂ ಕೇಂದ್ರ ಸರ್ಕಾರದ ನೀತಿಗಳಿಂದ ಆಗಿರುವ ನಷ್ಟ ಮತ್ತು ಸಮಸ್ಯೆಗಳನ್ನೂ ಹೇಳಿಕೊಂಡಿದ್ದಾರೆ. ಕೇಂದ್ರದಿಂದ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗ ಹೋಗಲು ತೀರ್ಮಾನಿಸಿದ್ದೇವೆ. ಇದಕ್ಕೆ ಮಾಲೀಕರುಗಳೂ ಒಪ್ಪಿಕೊಂಡಿದ್ದಾರೆ.

ಕಬ್ಬಿನ ಇಳುವರಿ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸ ಆಗುತ್ತದೆ. ಆದರೆ, ಎಲ್ಲಾ ಇಳುವರಿಗೂ 100 ರೂ. ಹೆಚ್ಚಳ ಆಗಲಿದೆ.

ಕೇಂದ್ರ ಸರ್ಕಾರ 10-5-2025ರಂದು ಕಟಾವು ಮತ್ತು ಸಾಗಾಟ ಸೇರಿಸಿ 10.5 ರಿಕವರಿ ಇರುವ ಕಬ್ಬಿಗೆ ಪ್ರತಿ ಮೆಟ್ರಿಕ್ ಟನ್‌ಗೆ ರೂ.3,550 ನಿಗದಿಪಡಿಸಿದೆ.

ರಾಜ್ಯದಲ್ಲಿ ಕಳೆದ ವರ್ಷ 5.6 ಕೋಟಿ ಮೆ.ಟನ್ ಕಬ್ಬು ಉತ್ಪಾದಿಸಲಾಗಿದ್ದು, ಈ ವರ್ಷ ಸುಮಾರು 6 ಕೋಟಿಗೂ ಹೆಚ್ಚು ಮೆ.ಟನ್ ಉತ್ಪಾದನೆಯಾಗುವ ಅಂದಾಜಿದೆ.

ಇಂದು ಸಭೆಯಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗುವಂತೆ ಕಟಾವು ಮತ್ತು ಸಾಗಾಟ ವೆಚ್ಚಕ್ಕೆ ಹೊರತುಪಡಿಸಿ, 11.25 ರಿಕವರಿ ಕಬ್ಬಿಗೆ ರೂ.3250 ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರ್ಕಾರ ರೂ.50 ಹೆಚ್ಚುವರಿಯಾಗಿ ಪಾವತಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಇದು ಬೆಳಗಾವಿ ಜಿಲ್ಲಾಧಿಕಾರಿ ಅವರು ಅಂತಿಮಗೊಳಿಸಿದ್ದ ದರಕ್ಕಿಂತ ರೂ.100 ಹೆಚ್ಚಾಗಿದೆ. ಇದಕ್ಕೆ ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ.  ರಿಕವರಿ ದರಕ್ಕೆ ಅನುಗುಣವಾಗಿ ಜಿಲ್ಲೆಯಿಂದ ಜಿಲ್ಲೆಗೆ ಪ್ರತ್ಯೇಕ ದರ ನಿಗದಿಪಡಿಸಲಾಗುವುದು. ಇದಕ್ಕೆ ರೈತರು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ.

ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಮುಂದಾಬೇಕೆಂದು ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮನವಿ ಮಾಡಿದ್ದು, ರೈತರು ಸಹ ತಮ್ಮ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡು, ಕಾನೂನು ಸುವ್ಯವಸ್ಥೆ ಸುಗಮವಾಗಲು ಸಹಕರಿಸಬೇಕು ಎಂದು ಮನವಿ ಮಾಡುತ್ತೇವೆ.

ಕೆಲವು ದಿನಗಳಿಂದ ರೈತರು ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ಆರ್‌ಪಿ ಸರಿಯಿಲ್ಲ, ಇನ್ನೂ ಹೆಚ್ಚು ನೀಡಬೇಕೆಂದು ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಬೆಳಗಾವಿ, ವಿಜಾಪುರ, ಬಾಗಲಕೋಟೆ, ಹಾವೇರಿ ಮತ್ತು ಗುಲ್ಬರ್ಗಾ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾ ನಿರತ ರೈತ ಮುಖಂಡರೊಂದಿಗೆ ಬೆಳಗಾವಿ ಜಿಲ್ಲಾಧಿಕಾರಿ  ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಮಾತುಕತೆಗಳು ವಿಫಲವಾದ ಬಳಿಕ ಸಂಪುಟದ ಸಹದ್ಯೋಗಿಗಳು ಹಾಗೂ ಹಿರಿಯ ಅಧಿಕಾರಿಗಳು ರೈತ ಮುಖಂಡರೊಂದಿಗೆ ಸಭೆ ನಡೆಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಅವರು ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ, 10.5 ರಿಕವರಿ ಇರುವ ಕಬ್ಬಿಗೆ ರೂ. 3,100 ಮತ್ತು 11.25 ರಿಕವರಿ ಇರುವ ಕಬ್ಬಿಗೆ ರೂ. 3,200 ದರ ನಿಗದಿಪಡಿಸಲು  ಸಕ್ಕರೆ ಕಾರ್ಖಾನೆಗಳಿಗೆ ಆಫರ್ ನೀಡಿದ್ದರು. ಇದಕ್ಕೆ ಕಾರ್ಖಾನೆ ಮಾಲೀಕರು ಒಪ್ಪಿಗೆ ನೀಡಿದ್ದರು. ಆದರೆ ಈ ದರಕ್ಕೆ ಪ್ರತಿಭಟನಾ ನಿರತ ರೈತರು ಒಪ್ಪಿಗೆ ನೀಡಿಲ್ಲ.

ಈ ಹಿನ್ನೆಲೆಯಲ್ಲಿ ಸಚಿವ ಸಂಪುಟದಲ್ಲಿ ನಿನ್ನೆ ವಿಸ್ತಾರವಾಗಿ ಚರ್ಚೆ ನಡೆಸಿ, ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವ ಕುರಿತು ಪ್ರಧಾನಮಂತ್ರಿ ಅವರಿಗೆ ಪತ್ರ ಬರೆದಿದ್ದೇವೆ.

ಇಂದು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳು ಮತ್ತು ರೈತರ ಪ್ರತಿನಿಧಿಗಳೊಂದಿಗೆ ಬೆಳಿಗ್ಗೆ 11.30 ರಿಂದ ಸಂಜೆ 6 ಗಂಟೆವರೆಗೆ ಸಮಗ್ರವಾಗಿ ಮಾತುಕತೆ ನಡೆಸಿದ್ದೇವೆ.

ಸಕ್ಕರೆ ಕಾರ್ಖಾನೆ ಮಾಲೀಕರು ಕೆಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದು, ಇದನ್ನು ಬಗೆಹರಿಸಲು ಚರ್ಚೆ ನಡೆಸುವುದಾಗಿ ತಿಳಿಸಿದ್ದೇವೆ.

ಸಕ್ಕರೆ ಎಂಎಸ್‌ಪಿ ಹೆಚ್ಚಳ, ಎಥೆನಾಲ್ ಹಂಚಿಕೆ ಹೆಚ್ಚಳ, ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಕೇಂದ್ರಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ನಿಯೋಗ ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದ್ದೇವೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದಾರೆ.

ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು, ಅದೇ ರೀತಿ ಕಬ್ಬು ಬೆಳೆಗಾರರು ಸಕ್ಕರೆ ಕಾರ್ಖಾನೆಗಳಿಂದ ಎದುರಿಸುತ್ತಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಪರಿಹಾರ ಒದಗಿಸಲು ಪ್ರತ್ಯೇಕ ಸಭೆ ನಡೆಸಲಾಗುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read