ಅಲೀಗಢ: ಮಾಸಿಕ 15 ಸಾವಿರ ರೂಪಾಯಿ ದುಡಿಯುವ ಕಟ್ಟಡ ಕಾರ್ಮಿಕರೊಬ್ಬರಿಗೆ 33.88 ಕೋಟಿ ರೂ. ತೆರಿಗೆ ಬಾಕಿ ಇದೆ ಎಂದು ಹೇಳಿ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ.
34 ವರ್ಷದ ಕರಣ್ ಕುಮಾರ್ ಕಟ್ಟಡ ಕಾರ್ಮಿಕರಾಗಿದ್ದು, ತಿಂಗಳಿಗೆ 15,000 ರೂ. ದುಡಿಯುತ್ತಾರೆ. ಅವರಿಗೆ ಇಷ್ಟೊಂದು ಪ್ರಮಾಣದ ಆದಾಯ ತೆರಿಗೆ ಬಾಕಿ ಇರುವುದಾಗಿ ನೋಟಿಸ್ ನೀಡಲಾಗಿದೆ.
ಇನ್ನು ಸಾರಿಗೆ ಕಂಪನಿಯೊಂದರಲ್ಲಿ ಸಣ್ಣಪುಟ್ಟ ಕೆಲಸ ಮಾಡುವ ಮೋಹಿತ್ ಕುಮಾರ್ ತಿಂಗಳಿಗೆ 8,500 ರೂ. ದುಡಿಯುತ್ತಿದ್ದು, ಅವರಿಗೆ 3.87 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.
ಈ ರೀತಿ ಅನೇಕರಿಗೆ ನೋಟಿಸ್ ನೀಡಿದ್ದು, ಅವರೆಲ್ಲ ಆತಂಕಗೊಂಡಿದ್ದಾರೆ. ತಿಂಗಳಿಗೆ ಇಷ್ಟು ಕಡಿಮೆ ಸಂಬಳ ಪಡೆಯುವವರು ಆದಾಯ ತೆರಿಗೆ ಪಾವತಿಸಬೇಕಿಲ್ಲ. ಆದರೆ,ಅವರ ಆಧಾರ್ ಕಾರ್ಡ್ ಸಂಖ್ಯೆ, ಪಾನ್ ಕಾರ್ಡ್ ಸಂಖ್ಯೆಯಂತಹ ವೈಯಕ್ತಿಕ ದಾಖಲೆಗಳ ಮಾಹಿತಿ ಸೋರಿಕೆಯಿಂದ ಇಂತಹ ಪ್ರಕರಣ ನಡೆಯುತ್ತಿವೆ ಎನ್ನಲಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ದೆಹಲಿಯ ಮಹಾವೀರ್ ಎಂಟರ್ಪ್ರೈಸಸ್ ಎನ್ನುವ ಕಂಪನಿ ಕಟ್ಟಡ ಕಾರ್ಮಿಕ ಕರಣ್ ಕುಮಾರ್ ಅವರ ಆಧಾರ್ ಮತ್ತು ಪಾನ್ ಸಂಖ್ಯೆ ಬಳಸಿ ಅವರ ಹೆಸರಲ್ಲಿ ಪೆಟ್ರೋಲಿಯಂ ಉತ್ಪನ್ನ ಮತ್ತು ಉಕ್ಕು ಮಾರಾಟದಲ್ಲಿ ವ್ಯವಹಾರ ನಡೆಸಿದೆ.
ಮೋಹಿತ್ ಕುಮಾರ್ ಅವರ ಆಧಾರ್ ಕಾರ್ಡ್ ಬಳಸಿಕೊಂಡು ಎಂ.ಕೆ. ಟ್ರೇಡರ್ಸ್ ಎನ್ನುವ ಕಂಪನಿ ಹಣಕಾಸಿನ ವ್ಯವಹಾರ ಮಾಡುತ್ತಿದ್ದು, ಮೋಹಿತ್ ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರಿಗೆ ಈ ವಿಷಯ ತಿಳಿಸಿದ್ದು, ಅವರು ಜಿಎಸ್‌ಟಿ ವಕೀಲರೊಬ್ಬರ ಬಳಿ ಕರೆದುಕೊಂಡು ಹೋದಾಗ ಈ ಮಾಹಿತಿ ಗೊತ್ತಾಗಿದೆ.